ಚಾಮರಾಜನಗರ: ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 791.2 ಮಿಲಿ ಮೀಟರ್ ಆದರೆ ಸೆಪ್ಟೆಂಬರ್ ಮೊದಲ ವಾರದವರೆಗೆ ಜಿಲ್ಲೆಯಲ್ಲಿ 623 ಮಿ.ಮೀ. ಮಳೆಯಾಗಿದೆ. 424 ಮಿ.ಮೀ. ವಾಡಿಕೆ ಮಳೆಗಿಂತ ಹೆಚ್ಚುವರಿಯಾಗಿ 200 ಮಿ.ಮೀ. ಮಳೆಯಾಗಿದೆ.
ಉತ್ತಮ ಮಳೆ ಬಂದಿರುವ ಹಿನ್ನೆಲೆಯಲ್ಲಿ 1,10,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಭತ್ತವನ್ನು ಈಗ ನಾಟಿ ಮಾಡಲು ಮುಂದಾಗಿರುವುದರಿಂದ ಶೇ.90ರಷ್ಟು ಪ್ರದೇಶದಲ್ಲಿ ಬಿತ್ತನೆಯ ಕಾರ್ಯದ ಗುರಿಯನ್ನು ಕೃಷಿ ಇಲಾಖೆ ಮುಟ್ಟಿದೆ.
ಈ ಕುರಿತು ಈಟಿವಿ ಭಾರತಕ್ಕೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಹೆಚ್.ಟಿ. ಚಂದ್ರಕಲಾ ಮಾತನಾಡಿ, 9,200 ಕ್ವಿಂಟಲ್ನಷ್ಟು 13 ಬಗೆಯ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ನೀಡಲಾಗಿದೆ. ಭತ್ತ, ರಾಗಿ, ಮುಸುಕಿನ ಜೋಳದ ಬಿತ್ತನೆ ಕಾರ್ಯ ಹಲವೆಡೆ ಆಗುತ್ತಿದ್ದು, 100 ರಷ್ಟು ಪ್ರಗತಿಯನ್ನು ಈ ಬಾರಿ ಸಾಧಿಸುತ್ತೇವೆ ಎಂದರು.
ಬಿತ್ತನೆ ಪ್ರದೇಶ ಹೆಚ್ಚಾದ್ದರಿಂದ, ಕೆಲವೆಡೆ ರಸಗೊಬ್ಬರ ಕೊರತೆ ಕಂಡುಬಂದಿದ್ದು, ಕೇಂದ್ರ ಕಚೇರಿಗೆ ಬೇಡಿಕೆಯಿಟ್ಟು ಹೆಚ್ಚುವರಿಯಾಗಿ 637 ಮೆಟ್ರಿಕ್ ಟನ್ ಯೂರಿಯಾ ತರಿಸಿಕೊಳ್ಳಲಾಗಿದೆ. ಕೆಲವು ದಿನಗಳ ಬಳಿಕ 500 ಮೆಟ್ರಿಕ್ ಟನ್ ಯೂರಿಯಾ ಬರಲಿದೆ. ಆದ್ದರಿಂದ, ರಸಗೊಬ್ಬರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಬಾರಿ ಮುಸುಕಿನ ಜೋಳ, ಕಬ್ಬು ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ವರುಣನ ಕೃಪೆ ಮುಂದುವರೆದರೆ ರೈತನಿಗೆ ಬಂಪರ್ ಬೆಳೆ ಬರಲಿದೆ.