ಚಿಕ್ಕಮಗಳೂರು: ಮತದಾರರ ಪಟ್ಟಿಯಲ್ಲಿ ಹೆಸರುಗಳು ನಾಪತ್ತೆ ಆಗಿವೆ ಎಂದು ಆರೋಪಿಸಿದ ಜಿಲ್ಲೆಯ ಬೈಗೂರು ಗ್ರಾಮಸ್ಥರು ಚುನಾವಣಾ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಿಗ್ಗೆಯಿಂದ ಶಾಂತಿಯುತವಾಗಿ ನಡೆಯುತ್ತಿದ್ದ ಮತದಾನ ಪ್ರಕ್ರಿಯೆಯಲ್ಲಿ ತದನಂತರ ಮತದಾರರ ಪಟ್ಟಿಯಲ್ಲಿ ಹೆಸರು ಕಾಣೆಯಾಗಿದೆ ಎಂಬ ಕೂಗು ಕೇಳಿಬಂತು. ಈ ವೇಳೆ ಅಸಾಮಾಧನಗೊಂಡ ಗ್ರಾಮಸ್ಥರು ಚುನಾವಣಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಚುನಾವಣಾ ಸಿಬ್ಬಂದಿ ರಕ್ಷಣೆಗೆ ನಿಯೋಜನೆಗೊಂಡಿದ್ದ ಕೆಎಸ್ಆರ್ಪಿ ತುಕುಡಿ ಗ್ರಾಮಸ್ಥರನ್ನು ಮತಗಟ್ಟೆಯಿಂದ ಹೊರ ಕರೆತಂದಿತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಶೃತಿ ಅವರು ಗ್ರಾಮಸ್ಥರನ್ನು ಮನವೊಲಿಸುವ ಯತ್ನ ನಡೆಸಿದರು. ಹಲವು ಸುತ್ತಿನ ಮಾತುಕತೆಯ ಬಳಿಕ ಕೋಪಗೊಂಡ ಗ್ರಾಮಸ್ಥರು ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.