ಚಾಮರಾಜನಗರ: ಶಾಲಾ ಬಾಲಕಿಯನ್ನು ಚುಡಾಯಿಸಿದ ಪ್ರಕರಣ ಸಂಬಂಧ ತಂದೆ - ಮಗ ಹಾಗೂ ಮತ್ತೋರ್ವನಿಗೆ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಹನೂರು ತಾಲೂಕಿನ ಕೌದಳ್ಳಿ ಗ್ರಾಮದ ಮಾದಪ್ಪ(45), ಈತನ ಮಗ ಆನಂದ (20) ಹಾಗೂ ಆನಂದನ ಸ್ನೇಹಿತ ನಾಗೇಂದ್ರ ಶಿಕ್ಷೆಗೊಳಗಾದ ಅಪರಾಧಿಗಳು. ಶಾಲಾ ಬಾಲಕಿಗೆ ಚುಡಾಯಿಸಿದ ಆನಂದ ಹಾಗೂ ನಾಗೇಂದ್ರನಿಗೆ 6 ತಿಂಗಳು ಜೈಲು, 5 ಸಾವಿರ ರೂ. ದಂಡ ಹಾಗೂ ಅಪ್ಪ ಮಾದಪ್ಪನಿಗೆ 1 ವರ್ಷ ಜೈಲು, 10 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ಸದಾಶಿವ ಎಸ್.ಸುಲ್ತಾನ್ ಪುರಿ ಆದೇಶಿಸಿದ್ದಾರೆ.
ಘಟನೆ ಹಿನ್ನೆಲೆ: ಆರೋಪಿಗಳಾದ ಆನಂದ್ ಹಾಗೂ ನಾಗೇಂದ್ರ ಅದೇ ಗ್ರಾಮದ ಬಾಲಕಿ ಶಾಲೆಗೆ ಹೋಗುವಾಗ ನಿತ್ಯ ಚುಡಾಯಿಸಿ, ರೇಗಿಸುತ್ತಿದ್ದರು. ಜೊತೆಗೆ ಶಾಲಾ ಬಳಿಯ ಹೋಗಿ ಕೂಡ ಚುಡಾಯಿಸುವುದನ್ನು ಮುಂದುವರೆಸಿದ್ದರು. 2018ರ ಡಿ.30ರಂದು ಮೊದಲ ಆರೋಪಿ ಆನಂದ್ ಹಾಗೂ ಆತನ ತಂದೆ ಮಾದಪ್ಪ ಬೈಕ್ನಲ್ಲಿ ಬಾಲಕಿಯ ಮನೆ ಬಳಿ ಹೋಗಿ ಗಲಾಟೆ ನಡೆಸಿದ್ದರು. ಈ ವೇಳೆ ಅಕ್ಕಪಕ್ಕದ ಜನ ಸುತ್ತುವರೆದಾಗ ಬೈಕ್ ಬಿಟ್ಟು ಪರಾರಿಯಾಗಿದ್ದರು.
ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬುದ್ಧಿವಾದ ಹೇಳಬೇಕಾದ ಅಪ್ಪನೇ ಹೋಗಿ ಗಲಾಟೆ ಮಾಡಿದ್ದರಿಂದ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕರಾಗಿ ಯೋಗೇಶ್ ವಾದ ಮಂಡಿಸಿದ್ದರು.