ಚಾಮರಾಜನಗರ: ದಟ್ಟಾರಣ್ಯ, ಪುರಾತನ ದೇಗುಲ, ಸೂಜಿಗಲ್ಲಿನಂತೆ ಎಲ್ಲರನ್ನು ಸೆಳೆಯುವ ಪ್ರಕೃತಿ ಹೊಂದಿರುವ ಚಾಮರಾಜನಗರದ ಪ್ರವಾಸೋದ್ಯಮ ಉತ್ತೇಜನಕ್ಕೆ ನಟ ಪುನೀತ್ ರಾಜ್ಕುಮಾರ್ ಪ್ರೋತ್ಸಾಹ ನೀಡಲು ಮುಂದಾಗಿದ್ದಾರೆ.
ಹೌದು, ಜಿಲ್ಲೆಯ ಪ್ರವಾಸಿ ತಾಣಗಳನ್ನು ಚಿತ್ರೀಕರಿಸಿ ವಿಡಿಯೋವೊಂದನ್ನು ಜಿಲ್ಲಾಡಳಿತ ರೂಪಿಸುತ್ತಿದ್ದು, ಇದರ ಭಾಗವಾಗಿ ಜಿಲ್ಲೆಯ ಪ್ರವಾಸೋದ್ಯಮದ ಕುರಿತು ಪುನೀತ್ ರಾಜ್ಕುಮಾರ್ ಸಂದೇಶ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಡಿಸಿ ಡಾ. ಎಂ.ಆರ್.ರವಿ ಮಾಹಿತಿ ನೀಡಿದ್ದಾರೆ.
ಹಿಂದುಳಿದ, ಅಭಿವೃದ್ಧಿ ಹೊಂದದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಕಳಚಲು ಜಿಲ್ಲಾಡಳಿತ ಹಾಕಿಕೊಂಡಿರುವ ಮಹಾತ್ವಾಂಕ್ಷಿ ಯೋಜನೆಯಾದ
'ಚೆಲುವ ಚಾಮರಾಜನಗರ'ಕ್ಕೆ ರಾಯಭಾರಿ ಆಗಿರುವ ಪುನೀತ್ ರಾಜ್ಕುಮಾರ್, ಸಂದೇಶ ನೀಡುವ ಮೂಲಕ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಲಿದ್ದಾರೆ ಎಂಬ ವಿಶ್ವಾಸವನ್ನು ಜಿಲ್ಲಾಡಳಿತ ವ್ಯಕ್ತಪಡಿಸಿದೆ.
ಈಗಾಗಲೇ ಪ್ರವಾಸೋದ್ಯಮ ಇಲಾಖೆ ಚಿತ್ರೀಕರಣ ಮುಗಿಸಿದ್ದು, ಪರಿಸರ, ಆಧ್ಯಾತ್ಮ, ಸಾಹಸ, ಪಾರಂಪರಿಕ ಸ್ಮಾರಕ, ಸಾಂಸ್ಕೃತಿಕ ಪ್ರವಾಸಿ ತಾಣಗಳನ್ನು ದೃಶ್ಯ ಕಾವ್ಯದ ಮೂಲಕ ಪ್ರಚುರಪಡಿಸಲಿದ್ದಾರೆ.