ಚಾಮರಾಜನಗರ: ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಖಾಸಗಿ ವಾಹನದಲ್ಲಿ ಬರುವುದೇನೋ ಸರಿ. ಆದರೆ, ಅವರ ಹಿಂಬಾಲಕರಿಗೂ ಆದರಾತಿಥ್ಯ, ಅವರ ವಾಹನಗಳಿಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರವೇಶ ನೀಡಲಾಗಿದೆ.
ಭಾನುವಾರ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪೂಜೆ ಸಲ್ಲಿಸಲು ಬಂದಿದ್ದ ವೇಳೆ ಅವರ ಹಿಂಬಾಲಕರ ವಾಹನಗಳನ್ನು ಬೆಟ್ಟಕ್ಕೆ ಬಿಟ್ಟಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿದೆ.
ಪಾಸ್ಗಳಿರುವ ಖಾಸಗಿ ವಾಹನ ಹೊರತುಪಡಿಸಿ ಅರಣ್ಯ ಇಲಾಖೆ ವಾಹನಗಳು, ಸರ್ಕಾರಿ ವಾಹನಗಳಿಗೆ ಮಾತ್ರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವೇಶಿಸಬೇಕು. ಸಾಮಾನ್ಯ ಭಕ್ತರು ಕೆಎಸ್ಆರ್ಟಿಸಿ ಬಸ್ ಮೂಲಕವೇ ದೇಗುಲ ತಲುಪಬೇಕು. ಆದರೆ, ಸಚಿವ ಲಿಂಬಾವಳಿ ಭೇಟಿ ವೇಳೆ, 20 ಕ್ಕೂ ಸಚಿವರ ಹಿಂಬಾಲಕರು ತಮ್ಮ ಖಾಸಗಿ ವಾಹನಗಳಲ್ಲಿ ಬೆಟ್ಟಕ್ಕೆ ಬಂದಿದ್ದು, ಇದನ್ನು ಕಂಡು ಕೂಡ ಅರಣ್ಯಾಧಿಕಾರಿಗಳ ಜಾಣ ಕುರುಡು ಪ್ರದರ್ಶನಕ್ಕೆ ಭಕ್ತರು ಆಕ್ರೋಶ ಹೊರಹಾಕಿದ್ದಾರೆ.
ಅಧಿಕಾರದಲ್ಲಿದ್ದವರಿಗೊಂದು, ಸಾಮಾನ್ಯರಿಗೊಂದು ಎಂಬ ಅರಣ್ಯ ಇಲಾಖೆಯ ಇಬ್ಬಗೆ ನೀತಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.