ಚಾಮರಾಜನಗರ: ಪೊಲೀಸ್ ಠಾಣೆ ಎಂದರೆ ತುಕ್ಕು ಹಿಡಿದ ವಾಹನಗಳು, ಆತಂಕ - ಭಯದ ವಾತಾವರಣ, ಗಲಿಬಿಲಿಗೊಳ್ಳುವ ಮನಸ್ಥಿತಿ ಸಾಮಾನ್ಯ. ಆದರೆ, ಈ ಠಾಣೆ ಮಾತ್ರ ಚೆಂದನೆಯ ಹೂಗಳಿಂದ ನಳನಳಿಸುತ್ತಿದ್ದು, ದೂರು ಕೊಡಲು ಬಂದವರು ಮನಸ್ಸಿಗೆ ನಿರಾಳ ಭಾವ ಮೂಡಿಸುತ್ತಿದೆ.
ಹೌದು. ಸಂತೇಮರಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ತಾಜುದ್ದಿನ್ ಮುಂದಾಳತ್ವದಲ್ಲಿ ಠಾಣೆಯ ಮುಂಭಾಗ " ಗುಲಾಬಿ ತೋಟ" ತಲೆ ಎತ್ತಿದೆ. ಮಹಿಳೆಯರು, ಮಕ್ಕಳ ಸ್ನೇಹಿ ವಾತಾವರಣ ನಿರ್ಮಾಣವಾಗಿದ್ದು, ಠಾಣೆಗೆ ಬರುವವರು ಹೂ ತೋಟಕ್ಕೆ ಮಾರು ಹೋಗಿದ್ದಾರೆ.
ಠಾಣೆಯ ಮುಂಭಾಗದ ಖಾಲಿ ಜಾಗದಲ್ಲಿ ಸರಿಸುಮಾರು 200 ಗಿಡಗಳನ್ನು ಪಿಎಸ್ಐ ತಾಜುದ್ದಿನ್ ಬೆಳೆಸಿದ್ದು, ಎಲ್ಲವೂ ಹೂ ಬಿಡುತ್ತಿವೆ. ರಕ್ಷಣಾ ಬೇಲಿಗಳನ್ನು ತೋಟಕ್ಕೆ ಹಾಕಿರುವುದರಿಂದ ಅಚ್ಷುಕಟ್ಟಾಗಿ ಕಾಣಿಸುತ್ತಿದೆ. ಇನ್ನು, ತೋಟದಲ್ಲಿ ಬೆಳೆದ ಹೂಗಳು ಠಾಣೆಯಲ್ಲಿರುವ ರಾಷ್ಟ್ರನಾಯಕರ ಚಿತ್ರಗಳಿಗೆ ನಿತ್ಯವೂ ಅರ್ಪಣೆಯಾಗುತ್ತಿರುವುದು ಮತ್ತೊಂದು ವಿಶೇಷವಾಗಿದೆ.
ಕೆಲ ಮಕ್ಕಳು ಹೂ ಕೇಳಿದರೆ, ಅವರಿಗೂ ಗುಲಾಬಿ ಉಚಿತವಾಗಿ ಸಿಗುತ್ತಿದೆ. ಇದರೊಟ್ಟಿಗೆ, ಠಾಣೆಯ ಕಾಂಪೌಂಡ್ ಮೇಲೆ ಕಾನೂನು ಅರಿವು, ಕಾಯ್ದೆಗಳು, ಸಹಾಯವಾಣಿ ಸಂಖ್ಯೆ ಬರೆಸಲಾಗಿದೆ, ಗುಲಾಬಿ ತೋಟದಲ್ಲಿ ಜನರು ಕೂರಲು ವ್ಯವಸ್ಥೆಯೂ ಇದೆ.
ಒಟ್ಟಿನಲ್ಲಿ ಪೊಲೀಸ್ ಠಾಣೆ ಎಂದರೆ ಬೈಗುಳ, ಭಯದ ವಾತಾವರಣ ಎಂಬ ಅಪವಾದದ ನಡುವೆ ಸುಂದರ ಕೈತೋಟ ರೂಪಿಸಿರುವುದು ನಿಜಕ್ಕೂ ಶ್ಲಾಘನೀಯ. ಇದೇ ರೀತಿ ಗುಂಡ್ಲುಪೇಟೆ ಪೊಲೀಸ್ ಠಾಣೆಯ ಆವರಣನ್ನು ಹಿಂದಿನ ಪಿಎಸ್ಐ ಹಸಿರುಮಯವಾಗಿಸಿದ್ದರು.
ಇದನ್ನೂ ಓದಿ: ಚಾಲಾಕಿ ಸ್ನೇಹಿತೆ.. ಗೆಳತಿಗೆ ಮದುವೆ ಕಾರ್ಡ್ ಕೊಡಲು ಬಂದು ಮನೆಯಲ್ಲಿದ್ದ ಚಿನ್ನಾಭರಣ ಕದ್ದಳು!