ಹುಬ್ಬಳ್ಳಿ/ಚಾಮರಾಜನಗರ/ಗಂಗಾವತಿ: ದೆಹಲಿಯಲ್ಲಿ ವಕೀಲರ ಮೇಲೆ ಪೊಲೀಸರ ಹಲ್ಲೆ ಖಂಡಿಸಿ ಹುಬ್ಬಳ್ಳಿ, ರಾಮನಗರ ಸೇರಿದಂತೆ ಗಂಗಾವಾತಿಯಲ್ಲಿ ವಕೀಲರು ಪ್ರತಿಭಟನೆ ನಡೆಸಿದರು.
ದೆಹಲಿಯ ತೀಸ್ ಹಜಾರಿ ಕೋರ್ಟ್ ಆವರಣದಲ್ಲಿ, ದೆಹಲಿ ಪೊಲೀಸರು ವಾಹನಗಳ ನಿಲುಗಡೆ ವಿಚಾರವಾಗಿ ಅಲ್ಲಿನ ವಕೀಲರ ಮೇಲೆ ಹಲ್ಲೆ ನಡೆಸಿ ವಾಹನಗಳನ್ನು ಜಖಂಗೊಳಿಸಿರುವುದು ಸರಿಯಲ್ಲ. ವಕೀಲರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಅದರಲ್ಲೂ ಪೊಲೀಸರಿಂದ ವಕೀಲರ ಮೇಲಿನ ದೌರ್ಜನ್ಯ ಹೆಚ್ಚುತಲೇ ಇದೆ. ಈ ಬಗ್ಗೆ ವಕೀಲರ ಸಂರಕ್ಷಣೆ ಕಾಯ್ದೆ ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ವಿದ್ಯಾನಗರದ ಮಹಿಳಾ ವಿದ್ಯಾಪೀಠದ ಎದುರು ಹುಬ್ಬಳ್ಳಿ - ಧಾರವಾಡ ರಸ್ತೆ ತಡೆದು ಹುಬ್ಬಳ್ಳಿ ವಕೀಲರು ಪ್ರತಿಭಟನೆ ನಡೆಸಿದರು. ಚಾಮರಾಜನಗರದ ವಕೀಲರು, ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ಮಾಡಿದರು. ಇನ್ನು ಗಂಗಾವತಿಯಲ್ಲಿ ಕಲಾಪದಿಂದ ದೂರ ಉಳಿಯುವ ಮೂಲಕ ಲಾಯರ್ಗಳು ಪ್ರೊಟೆಸ್ಟ್ ಮಾಡಿದರು.