ಕೊಳ್ಳೇಗಾಲ: ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಅತ್ಯಾಚಾರವನ್ನು ನಿಯಂತ್ರಿಸುವಲ್ಲಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಹಿನ್ನೆಲೆ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಕೂಡಲೇ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕೆಂದು ತಾಲೂಕು ಬಿಎಸ್ಪಿ ಕಾರ್ಯಕರ್ತರು ಒತ್ತಾಯಿಸಿದರು.
ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಾಗಿ ತಾಲೂಕು ಕಚೇರಿ ಮುಂಭಾಗ ಸಮಾವೇಶಗೊಂಡ ಬಿಎಸ್ಪಿ ಕಾರ್ಯಕರ್ತರು ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ಯಪಡಿಸಿದರು. ಉತ್ತರ ಪ್ರದೇಶದ ಹಥ್ರಾಸ್ನಲ್ಲಿ ನಡೆದ ಅತ್ಯಾಚಾರವನ್ನು ಬಿಎಸ್ಪಿ ಖಂಡಿಸುತ್ತದೆ. ಮೃತ ಹೆಣ್ಣುಮಗಳ ಅತ್ಯಾಸಂಸ್ಕಾರಕ್ಕೂ ಶವ ಕೊಡದ ಪೊಲೀಸರು ತಾವೇ ಸುಟ್ಟಿರುವುದು. ಸಾಕ್ಷ್ಯ ನಾಶದ ಪ್ರಯತ್ನವಾಗಿದೆ. ಈ ಹಿನ್ನೆಲೆ ಸಂತ್ರಸ್ತೆ ಮತ್ತು ಆಕೆಯ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಇದೇ ವೇಳೆ, ಅಪರಾಧಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಉಸ್ತುವಾರಿ ತಹಶೀಲ್ದಾರ್ ಸುದರ್ಶನ್ ಅವರಿಗೆ ಮನವಿ ಪತ್ರಸಲ್ಲಿಸಿದರು. ಕೊಳ್ಳೇಗಾಲ ಬಿಎಸ್ಪಿ ನಗರಸಭಾ ಸದಸ್ಯ ಜಯರಾಜ್ ಮಾತನಾಡಿ, ಹಥ್ರಾಸ್ನಲ್ಲಿ ನಡೆದ ಅತ್ಯಾಚಾರವನ್ನು ನಾವು ಖಂಡಿಸುತ್ತೇವೆ. ಅಲ್ಲಿನ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ವೈದ್ಯಕೀಯ ಇಲಾಖೆ ಪ್ರಕರಣ ಸಾಕ್ಷ್ಯ ನಾಶಮಾಡಲು ಯತ್ನಿಸಿದೆ. ಉತ್ತರ ಪ್ರದೇಶದಲ್ಲಿ ಹೆಚ್ಚು ಮಹಿಳಾ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು. ಅಲ್ಲಿನ ಬಿಜೆಪಿ ಸರ್ಕಾರ ಈ ಕೃತ್ಯಗಳ ನೈತಿಕಹೊಣೆ ಹೊರಬೇಕು. ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ತಪಿತಸ್ಥರಿಗೆ ಮರಣದಂಡನೆ ಶಿಕ್ಷೆ ನೀಡುವ ಮೂಲಕ ಸಂತ್ರಸ್ತೆಗೆ ನ್ಯಾಯ ಒದಗಿಸಬೇಕು ಎಂದು ತಾಲೂಕು ಬಿಎಸ್ಪಿ ಅಧ್ಯಕ್ಷ ರಾಜಶೇಖರ್ ತಿಳಿಸಿದರು.