ಚಾಮರಾಜನಗರ: ಸನಾತನ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ತಮಿಳುನಾಡಿನ ಸಚಿವ ಉದಯನಿಧಿ ಅವರನ್ನು ಬಂಧಿಸಿ, ಮೊಕದ್ದಮೆ ದಾಖಲಿಸಬೇಕು ಎಂದು ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ಆಗ್ರಹಿಸಿದರು.
ಚಾಮರಾಜನಗರದಲ್ಲಿ ಮಾಧ್ಯಮವರೊಟ್ಟಿಗೆ ಮಾತನಾಡಿ, ಸನಾತನ ಧರ್ಮ ಕೊರೊನಾ, ಡೆಂಘಿ ಇದ್ದಂತೆ ಎಂದು ಹೇಳಿಕೆ ಕೊಟ್ಟಿರುವುದು ಖಂಡನೀಯ, ಸನಾತನ ಧರ್ಮ ಎಂದರೆ ನಿನ್ನೆ- ಮೊನ್ನೆ ಹುಟ್ಟಿದ್ದಲ್ಲ, ಉದಯನಿಧಿ ಅಂತಹವರು ಕೋಟಿ ಮಂದಿ ಹುಟ್ಟಿದರೂ ಹಿಂದೂ ಧರ್ಮವನ್ನು ಕಿತ್ತುಹಾಕಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಎಲ್ಲಾ ಧರ್ಮಗಳಿಗೂ ಅದರದೇ ಗೌರವವಿದೆ, ಎಲ್ಲ ಧರ್ಮವನ್ನು ಗೌರವಯುತವಾಗಿ ಕಾಣಬೇಕು, ಎಲ್ಲ ಧರ್ಮವನ್ನು ಪ್ರೀತಿಸಬೇಕು. ಅದನ್ನು ಬಿಟ್ಟು ಆ ಧರ್ಮ ಸರಿಯಿಲ್ಲ, ಈ ಧರ್ಮ ಸರಿಯಿಲ್ಲ ಎನ್ನುವುದು ತಪ್ಪು. ಕೂಡಲೇ ಉದಯನಿಧಿಯನ್ನು ಬಂಧಿಸಿ, ಮೊಕದ್ದಮೆ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.
ಕಾವೇರಿ ಕಿಚ್ಚು 6 ನೇ ದಿನ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ 6ನೇ ದಿನಕ್ಕೆ ಪ್ರತಿಭಟನೆ ಕಾಲಿಟ್ಟಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕರ್ನಾಟಕಕ್ಕೆ ಕುಡಿಕೆ ನೀರು ಸಿಕ್ಕಿದೆ ಎಂದು ಆರೋಪಿಸಿ ಕುಡಿಕೆಯಲ್ಲಿ ನೀರನ್ನು ಹಿಡಿದು ಪ್ರತಿಭಟನೆ ನಡೆಸಿ ತಮಿಳುನಾಡಿಗೆ ನೀರು ಬಿಡುವುದನ್ನು ಕೂಡಲೇ ನಿಲ್ಲಿಸಬೇಕೆಂದು ಒತ್ತಾಯಿಸಿದರು. ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತದಲ್ಲಿ ರಸ್ತೆ ತಡೆದು ಕುಡಿಕೆಯಲ್ಲಿ ನೀರು ಹಿಡಿದು ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಉದಯನಿಧಿ ಹೇಳಿಕೆಗೆ ಬಿಜೆಪಿ ಖಂಡನೆ: ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಬಿಜೆಪಿ ಖಂಡಿಸಿದ್ದು, ರಾಹುಲ್ ಗಾಂಧಿ ಮೊಹಬ್ಬತ್ ಕಿ ದುಕಾನ್ ಬಗ್ಗೆ ಮಾತನಾಡುತ್ತಾರೆ. ಆದರೆ, ಅದರ ಮಿತ್ರ ಪಕ್ಷವಾದ ಡಿಎಂಕೆ ನಾಯಕ ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಕರೆ ನೀಡಿದ್ದಾರೆ. ಕಾಂಗ್ರೆಸ್ ಈ ಬಗ್ಗೆ ಮೌನ ವಹಿಸಿದ್ದು, ಹೇಳಿಕೆಗೆ ಬೆಂಬಲ ನೀಡಿದಂತಿದೆ ಎಂದು ಟೀಕಿಸಿದೆ.
ತಾನು ನೀಡಿದ ಹೇಳಿಕೆಗೆ ಬದ್ಧ:-ಸಚಿವ ಉದಯನಿಧಿ: ಈ ಕುರಿತು ಪ್ರತಿಕ್ರಿಯಿಸಿರುವ ಉದಯನಿಧಿ ಸನಾತನ ಧರ್ಮ ಕೊರೊನಾವೈರಸ್, ಮಲೇರಿಯಾ ಮತ್ತು ಡೆಂಘೀ ವೈರಸ್ ಮತ್ತು ಸೊಳ್ಳೆಗಳಿಂದ ಉಂಟಾಗುವ ಜ್ವರವಿದ್ದಂತೆ. ಇಂಥದ್ದನ್ನು ಬೇರು ಸಮೇತ ಕಿತ್ತು ಹಾಕಬೇಕು. ಸನಾತನ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುತ್ತದೆ. ಇದರ ನಿರ್ಮೂಲನೆ ಮಾಡುವುದರ ಮೂಲಕ ಮಾನವೀಯತೆ ಮತ್ತು ಮಾನವ ಸಮಾನತೆಯನ್ನು ಎತ್ತಿಹಿಡಿಯಬೇಕು ಎಂದು ಹೇಳಿಕೆ ನೀಡಿದ್ದೆ. ಸನಾತನಿ ಜನರ ಮಾರಣಹೋಮಕ್ಕೆ ಕರೆ ನೀಡಿಲ್ಲ. ಈ ಬಗ್ಗೆ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಉದಯ್ನಿಧಿ ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆ: ಹೈಕೋರ್ಟ್‌ನಲ್ಲಿ ದಾವೆ ಹೂಡುತ್ತೇವೆ ಎಂದ ಮುತಾಲಿಕ್