ಚಾಮರಾಜನಗರ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡಧ್ವಜ ಸುಟ್ಟು ಹಾಕಿರುವ ಎಂಇಎಸ್ ಪುಂಡರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಸಂಘಟನೆ ನಿಷೇಧಿಸುವಂತೆ ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ಹೊರಹಾಕಲಾಯಿತು.
ನಗರದ ಶ್ರೀಚಾಮರಾಜೇಶ್ವರ ಉದ್ಯಾನವನದ ಆವರಣದಲ್ಲಿ ಸೇನಾಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆತಡೆ ನಡೆಸಿ ಎಂಇಎಸ್ ಸಂಘಟನೆ, ಮಹಾರಾಷ್ಟ್ರ ಸರ್ಕಾರ, ರಾಜ್ಯ ಸರ್ಕಾರ, ವಿರೋಧ ಪಕ್ಷದ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ನಮ್ಮ ಸರ್ಕಾರ ಇದೆಯೋ ಸತ್ತು ಹೋಗಿದೆಯೋ ಎಂಬ ಅನುಮಾನ ಕಾಡುತ್ತಿದೆ. ರಾಜ್ಯದಲ್ಲಿ ಸರ್ಕಾರ ಜೀವಂತವಾಗಿದ್ದರೆ ಇಂತಹ ಕೃತ್ಯ ಆಗುತ್ತಿರಲಿಲ್ಲ. ನಮ್ಮ ಸರ್ಕಾರಕ್ಕೆ ನಾಚಿಕೆ ಆಗಬೇಕು. ಮರಾಠಿಗರ ಮತ ಬ್ಯಾಂಕ್ಗಾಗಿ ಸರ್ಕಾರ ಇಡೀ ರಾಜ್ಯವನ್ನು ಬಲಿ ಕೊಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮರಾಠಿ ಪುಂಡರು ಬೆಳಗಾವಿಗೆ ಬಂದು ರಾಜ್ಯ ಸರ್ಕಾರದ ವಾಹನಗಳ ಧ್ವಂಸ ಮಾಡಿದ್ದಾರೆ. ರಾಜ್ಯದ ಪ್ರವಾಸಿಗರ ಮೇಲೆ ಹಲ್ಲೆ ಮಾಡಿದ್ದಾರೆ ಇಂತಹ ಪ್ರಕರಣ ಬೇರೆ ರಾಜ್ಯದಲ್ಲಿ ನಡೆದಿದ್ದರೆ ದೊಡ್ಡಮಟ್ಟದ ಹೋರಾಟ ನಡೆಯುತ್ತಿತ್ತು. ವಿರೋಧ ಪಕ್ಷ ಸೇರಿದಂತೆ ಎಲ್ಲ ಪಕ್ಷಗಳು ರಾಜ್ಯವನ್ನು ಮಾರಾಟ ಮಾಡಲು, ಬಲಿ ಕೊಡಲು ಹೊರಟಿರುವುದು ಅತ್ಯಂತ ಖಂಡನೀಯವಾದದ್ದು ಎಂದು ಅಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿರಿ: ಬೆಂಗಳೂರಿನ ಎಲ್ಲಾ ಪ್ರತಿಮೆಗಳ ಬಳಿ ನಿಗಾವಹಿಸಿ : ಡಿಸಿಪಿಗಳಿಗೆ ಪೊಲೀಸ್ ಆಯುಕ್ತರ ತಾಕೀತು
ಮಹಾಜನ ವರದಿಯನ್ನು ಎಲ್ಲಾ ಸರ್ಕಾರಗಳು ಒಪ್ಪಿಕೊಂಡಿವೆ. ಆದರೆ, ಎಂಇಎಸ್ನವರ ಖ್ಯಾತೆ ತೆಗೆಯುತ್ತಿದ್ದಾರೆ. ಬೆಳಗಾವಿಗೆ ಬಂದು ದೌರ್ಜನ್ಯ ಮಾಡುತ್ತಿರುವುದು ಸರಿಯಲ್ಲ. ಕನ್ನಡಿಗರು ಮನಸ್ಸು ಮಾಡಿದರೆ ಗೋಕಾಕ್, ಕಾವೇರಿ ಚಳವಳಿ ಮಾದರಿಯಲ್ಲಿ ತಕ್ಕ ನೀಡಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.