ಚಾಮರಾಜನಗರ : ಕೊರೊನಾ ಕಾರಣದಿಂದ ಕೆಲಸ ಇಲ್ಲದಿದ್ದರಿಂದ ಶುಲ್ಕ ಭರಿಸಲಾಗದೇ ಮಗನನ್ನು ಸರ್ಕಾರಿ ಶಾಲೆಗೆ ದಾಖಲಿಸಲು ಮುಂದಾದರೂ ಖಾಸಗಿ ಶಾಲೆ ಮಾತ್ರ ವರ್ಗಾವಣೆ ಪತ್ರ ಕೊಡದೇ ಕಳೆದ ಒಂದೂವರೆ ತಿಂಗಳಿನಿಂದ ಸತಾಯಿಸುತ್ತಿರುವ ಆರೋಪ ಕೇಳಿ ಬಂದಿದೆ.
ನಗರದ ಕೆ ಪಿ ಮೊಹಲ್ಲಾ ನಿವಾಸಿ ಸೈಯದ್ ಸಿಗ್ಬತ್ ಉಲ್ಲಾ ಎಂಬುವರ ಮಗ ರೈಯಾನ್ ಉಲ್ಲಾ ಮಲ್ಲಯ್ಯನಪುರದ ಎಸ್ಡಿಎ ಖಾಸಗಿ ಶಾಲೆಯಲ್ಲಿ 5ನೇ ತರಗತಿಯಲ್ಲಿ ತೇರ್ಗಡೆಯಾಗಿದ್ದಾನೆ. ಆದರೆ, ಶುಲ್ಕ ಭರಿಸಲಾಗದಿರುವುದರಿಂದ ಮೌಲನಾ ಆಜಾದ್ ಸರ್ಕಾರಿ ಶಾಲೆಗೆ ದಾಖಲಿಸಲು ಪೋಷಕರು ಮುಂದಾಗಿದ್ದಾರೆ.
ಆದರೆ, ಪೂರ್ಣ ಶುಲ್ಕ ಕಟ್ಟುವ ತನಕ ಟಿಸಿ ಕೊಡುವುದಿಲ್ಲ ಎಂದು ಶಾಲೆ ಪಟ್ಟು ಹಿಡಿದಿದ್ದು, ಕಳೆದ ಒಂದೂವರೆ ತಿಂಗಳುಗಳಿಂದ ಅಪ್ಪ - ಮಗ ಇಬ್ಬರು ಟಿಸಿಗಾಗಿ ಪರದಾಡುತ್ತಿದ್ದಾರೆ. ಕೊರೊನಾ ಬಂದು ಜೀವಿಸುವುದೇ ಕಷ್ಟವಾಗಿದೆ.
ಈಗ 14 ಸಾವಿರ ರೂ. ಕೊಡಿ ಎಂದರೆ ಎಲ್ಲಿ ಹೋಗೋದು, ತಿನ್ನುವುದಕ್ಕೇ ಊಟ ಇಲ್ಲ, ಶುಲ್ಕ ಎಲ್ಲಿಂದ ಕಟ್ಟಲಿ, ಶುಲ್ಕ ಭರಿಸುವುದಾಗಿದ್ದರೇ ತನ್ನ ಮಗನನ್ನು ಎಸ್ಡಿಎ ಶಾಲೆಯಲ್ಲೇ ಓದಿಸುತ್ತಿದ್ದೆ. ಸರ್ಕಾರಿ ಶಾಲೆಗೇಕೆ ಕಳುಹಿಸುತ್ತಿದ್ದೆ ಎಂದು ಸೈಯದ್ ಸಿಗ್ಬತ್ ಅಳಲು ತೋಡಿಕೊಂಡಿದ್ದಾರೆ.
''ಎಲ್ಲರೂ ಶಾಲೆಗೆ ಹೋಗಲು ತಯಾರಿ ನಡೆಸಿದ್ದಾರೆ, ಆನ್ಲೈನ್ ಕ್ಲಾಸ್ ನಲ್ಲೂ ಭಾಗಿಯಾಗುತ್ತಿದ್ದಾರೆ. ತಮ್ಮನಿಗೆ ಟಿಸಿ ಕೊಡದಿರುವುದರಿಂದ ನಿತ್ಯವೂ ಪರದಾಡುತ್ತಿದ್ದೇವೆ, ಹಣವಿದ್ದರೇ ಅದೇ ಶಾಲೆಯಲ್ಲಿ ಓದಿಸುತ್ತಿದ್ದೆವು. ಈಗ ಅಪ್ಪ ಕೂಲಿಗೂ ಹೋಗದೇ ನಿತ್ಯ ಕಚೇರಿ, ಶಾಲೆಗೆ ಅಲೆದಾಡುತ್ತಿದ್ದಾರೆ. ಕೂಲಿ ಕೆಲಸಕ್ಕೆ ತೆರಳಿದರೇ ತಮ್ಮನ ವಿದ್ಯಾಭ್ಯಾಸ ಮೊಟಕಾಗಲಿದೆ.
ನಿತ್ಯ ಅಲೆದಾಡಿದರೆ ಕೂಲಿ ಹಣವಿಲ್ಲದೇ ಪರದಾಡಬೇಕಾಗುತ್ತದೆ. ಈ ಇಕ್ಕಟ್ಟಿನಲ್ಲಿ ಸಿಲುಕಿದ್ದೇವೆ. ಜಿಲ್ಲಾಧಿಕಾರಿ, ಶಿಕ್ಷಣ ಇಲಾಖೆ ಉಪ ನಿರ್ದೇಶಕ, ಬಿಇಒ ಅವರಿಗೆ ಅರ್ಜಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ'' ಎಂದು ರೈಯಾನ್ ಉಲ್ಲಾ ಅಕ್ಕ ಸೈಯದಾನಿ ಸಂದಿಗ್ಧತೆ ತೆರೆದಿಟ್ಟರು.
ಶಿಕ್ಷಣ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ವಿದ್ಯಾರ್ಥಿಗೆ ಪರಿಹಾರ ಕೊಡಬೇಕಿದೆ. ಇಲ್ಲದಿದ್ದರೇ, ಶುಲ್ಕ ಕಟ್ಟಲಾಗದೇ ಶಿಕ್ಷಣವನ್ನೇ ಈ ವಿದ್ಯಾರ್ಥಿ ಮೊಟಕುಗೊಳಿಸಲಿದ್ದಾನೆ.