ಚಾಮರಾಜನಗರ: ಮಳೆ ಬಂದಾಗ ಕರೆಂಟ್ ಬಾರದೇ ಇದ್ದರೆ ಚೆಸ್ಕಾಂನ್ನು ಶಪಿಸುವವರೇ ಬಹಳ ಮಂದಿ. ಆದರೆ, ಚೆಸ್ಕಾಂ ನೌಕರರ ಪಾಡು ಕಚೇರಿಯೊಳಗೆ ಬೆಚ್ಚಗೆ ಕುಳಿತುಕೊಂಡಷ್ಟು ಸುಲಭವಲ್ಲ ಎಂಬ ಮಾತಿಗೆ ಈ ಕಿರಿಯ ಪವರ್ ಮ್ಯಾನ್ ಉದಾಹರಣೆಯಾಗಿದ್ದಾರೆ. ಸೆಸ್ಕ್ ನಲ್ಲಿ ಕಿರಿಯ ಪವರ್ ಮ್ಯಾನ್ ಆಗಿರುವ ನಾಗೇಶ್ ನಾಯಕ್ ಎಂಬುವರು ಮಳೆ ನೀರು, ಯುಜಿಡಿ ನೀರಿನಿಂದ ತುಂಬಿರುವ ಚಾಮರಾಜನಗರ ತಾಲೂಕಿನ ದೊಡ್ಡರಾಯಪೇಟೆ ಕೆರೆಯಲ್ಲಿ ಅದೂ ಮುಳ್ಳುಗಂಟಿಗಳಿರುವ ನೀರಿನಲ್ಲಿ ಈಜಿ ವಿದ್ಯುತ್ ಪರಿವರ್ತಕವನ್ನು (ಟಿಸಿ) ಸರಿಪಡಿಸಿ ಕಾಯಕ ನಿಷ್ಠೆ ತೋರಿದ್ದಾರೆ.
ಕಳೆದ 5 - 6 ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ರಾಮಸಮುದ್ರ ಶಾಖೆಗೆ ಬರುವ ಕೊಡಿಮೊಳೆ ಫೀಡರ್ನ 11 ಕೆವಿ ಮಾರ್ಗದ ವಿದ್ಯುತ್ ಕಂಬದ ಮೇಲೆ ಮರವೊಂದು ಬಿದ್ದಿತ್ತು. ಇದರಿಂದಾಗಿ, ಸುಮಾರು 4 ದಿನಗಳಿಂದಲೂ ಕೊಡಿಮೊಳೆ ಗ್ರಾಮದ ಸುತ್ತಲೂ ಆಗಾಗ್ಗೆ ವಿದ್ಯುತ್ ಕೈ ಕೊಡುತ್ತಿತ್ತು. ಇಂದು ಸಮಸ್ಯೆ ಪತ್ತೆಹಚ್ಚಿದ ಪವರ್ ಮ್ಯಾನ್ ನಾಗೇಶ್ ನಾಯಕ್ ಮರವನ್ನು ತೆರವುಗೊಳಿಸಿ ಕೋಡಿಮೋಳೆ ಸುತ್ತಮುತ್ತಲಿನ ನಾಲ್ಕು ಗ್ರಾಮಗಳಿಗೆ ಮತ್ತೆ ಬೆಳಕು ಹರಿಯುವಂತೆ ಮಾಡಿದ್ದಾರೆ.
ನೀರು, ಬೆಂಕಿ ಹಾಗೂ ಗಾಳಿ ನಡುವೆ ಆಟ ಸಲ್ಲದು ಎಂಬ ಮಾತಿದೆ. ಆದರೆ, ವಿದ್ಯುತ್ ಇಲಾಖೆ ಸಿಬ್ಬಂದಿ ಇವೆಲ್ಲದರ ಜೊತೆಗೆ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡಬೇಕು ಎಂಬುದಕ್ಕೆ ನಾಗೇಶ್ ನಾಯಕ್ ಉದಾಹರಣೆಯಾಗಿದ್ದಾರೆ. ಮೇ 5 ರಿಂದ ವಿದ್ಯುತ್ ಪರಿವರ್ತಕಗಳ ನಿರ್ವಹಣಾ ಅಭಿಯಾನವೂ ನಡೆಯುತ್ತಿದ್ದು ಸಾವಿರಾರು ಟಿಸಿಗಳಿಗೆ ಸರ್ವೀಸ್ ಮಾಡಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಯೆಲ್ಲೆಡೆ ಭಾರಿ ಮಳೆ, ಬಡಾವಣೆ ಜಲಾವೃತ