ಚಾಮರಾಜನಗರ: ಪೊಲೀಸ್ ಇನ್ಸ್‌ಪೆಕ್ಟರ್ ಹುದ್ದೆಗೆ ರಾಜೀನಾಮೆ ಕೊಟ್ಟು ರಾಜಕೀಯ ಅಖಾಡಕ್ಕೆ ಧುಮುಕಿರುವ ಬಿ.ಪುಟ್ಟಸ್ವಾಮಿ ಇಂದು ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ನಡೆಸಿದ ಅಭಿಮಾನಿಗಳ ಬೃಹತ್ ಸಮಾವೇಶ ಮಾಡಿದರು. ಸಮಾವೇಶದಲ್ಲಿ ಜನತೆ, ಅಭಿಮಾನಿಗಳು, ಬೆಂಬಲಿಗರು ನೀವು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ, ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದ್ದು, ಸದ್ಯದಲ್ಲೇ ಪಕ್ಷ ಆಯ್ಕೆ ಮಾಡಿಕೊಂಡು ಜನರ ಬಳಿಗೆ ಹೋಗುವುದಾಗಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಸ್ಪರ್ಧಾಳು ನಿವೃತ್ತ ಪೋಲಿಸ್ ಅಧಿಕಾರಿ ಬಿ.ಪುಟ್ಟಸ್ವಾಮಿ ಹೇಳಿದರು.
ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯ ಶ್ರೀಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಬಿ.ಪುಟ್ಟಸ್ವಾಮಿ ಅಭಿಮಾನಿ ಬಳಗ ಅಯೋಜಿಸಿದ್ದ "ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ 2023ಕ್ಕೆ ಕೊಳ್ಳೇಗಾಲದ ಭರವಸೆ ಬೆಳಕು ಬಿ.ಪುಟ್ಟಸ್ವಾಮಿ" ಎಂಬ ಜನಾಭಿಪ್ರಾಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ನಡೆದ ಜನಾಭಿಪ್ರಾಯ ಬೃಹತ್ ಸಭೆಯಲ್ಲಿ ನಿರೀಕ್ಷೆಗೂ ಮೀರಿ ವ್ಯಾಪಕ ಬೆಂಬಲ ವ್ಯಕ್ತಪಡಿಸುವ ಮೂಲಕ ನೀವು ಯಾವ ಪಕ್ಷಕ್ಕೂ ಹೋದರೂ ನಾವು ಕೈ ಜೋಡಿಸುತ್ತೇವೆ, ನಿಮ್ಮ ಜತೆಗಿರುತ್ತೇವೆ ಎಂದು ಎಲ್ಲ ಜನರು ಒಮ್ಮತದಿಂದ ಅಭಿಪ್ರಾಯ ತಿಳಿಸಿದ್ದಾರೆ. ಇಷ್ಟೊಂದು ಜನರು ಸೇರುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ, ನಿಜಕ್ಕೂ ತುಂಬಾ ಸಂತಸ ತಂದಿದೆ, ಸಮಾವೇಶದಲ್ಲಿ ಭಾವುಕರಾದರು.
ಜನಾಭಿಪ್ರಾಯದ ಪಕ್ಷ ಆಯ್ಕೆ: "ಎಲ್ಲಾ ಪಕ್ಷದವರು ಆಹ್ವಾನ ಮಾಡುತ್ತಿದ್ದಾರೆ. ಆದರೆ, ನಾವು ಜನಾಭಿಪ್ರಾಯ ಸಂಗ್ರಹಿಸದೇ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗಬಾರದು. ಜನರ ಅಭಿಪ್ರಾಯವೇ ಅಂತಿಮವಾಗಿರುವುದರಿಂದ ಅವರ ಅಭಿಪ್ರಾಯದಿಂದಲೇ ಮುಂದಿನ ನಿರ್ಧಾರ ಕೈಗೊಳ್ಳಬೇಕು ಎಂದಿದ್ದೇನೆ. ಇಂದು ನಡೆದ ಸಮಾವೇಶಕ್ಕೆ ಕೊಳ್ಳೇಗಾಲ ಕ್ಷೇತ್ರದ ಮೂಲೆಮೂಲೆಯಿಂದ ಜನತೆ ಸ್ವಯಂಪೇರಿತರಾಗಿ ಅಪಾರ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ವ್ಯಾಪಕ ಬೆಂಬಲ ನೀಡಿದ್ದೀರಿ, ಯಾವ ಪಕ್ಷಕ್ಕೂ ಹೋದರೂ ಕೈಜೋಡಿಸುವ ನಂಬಿಕೆ ನನಗಿದೆ. ವಾರದೊಳಗೆ ಪಕ್ಷ ಅಂತಿಮಗೊಳಿಸಿಕೊಂಡು ನಿಮ್ಮ ಬಳಿಗೆ ಬರುತ್ತೇನೆ" ಎಂದರು.
ತೆರೆದ ವಾಹನದಲ್ಲಿ ಮೆರವಣಿಗೆ: ಸಂತೇಮರಹಳ್ಳಿ ಎಪಿಎಂಸಿ ಪ್ರಾಂಗಣದ ಆವರಣದಿಂದ ತೆರದ ವಾಹನದಲ್ಲಿ ಬಿ.ಪುಟ್ಟಸ್ವಾಮಿ ಅವರನ್ನು ಜನಸಾಗರೊಂದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇದಿಕೆಗೆ ಕರೆ ತರಲಾಯಿತು. ಕೊಳ್ಳೇಗಾಲ ಕ್ಷೇತ್ರದ ಮುಂದಿನ ಶಾಸಕ ಬಿ.ಪುಟ್ಟಸ್ವಾಮಿ ಎಂದು ಜೈಕಾರ ಕೂಗಿ ಅಭಿಮಾನಿಗಳು, ಬೆಂಬಲಿಗರು ಸಂಭ್ರಮಿಸಿದರು.
ನೌಕರಿಗೆ ರಾಜನಾಮೆ: ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಜನಮನ್ನಣೆ ಗಳಿಸಿದ್ದ ಬಿ.ಪುಟ್ಟಸ್ವಾಮಿ ತಮ್ಮ ನೌಕರಿಗೆ ರಾಜೀನಾಮೆ ನೀಡಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಟಿಕೇಟ್ ಆಕಾಕ್ಷಿಯಾಗಿದ್ದಾರೆ. ಮೈಸೂರಿನ ಐಜಿಪಿ ಕಚೇರಿಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನ ವಿಭಾಗದಲ್ಲಿ ಸದ್ಯ ಕರ್ತವ್ಯ ನಿರ್ವಹಿಸುತ್ತಿ ಬಿ.ಪುಟ್ಟಸ್ವಾಮಿ ಸ್ವಯಂ ನಿವೃತ್ತಿ ತೆಗೆದುಕೊಳ್ಳಲು ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು.
ವೃತ್ತಿ ಜೀವನ: ಮೈಸೂರು ನಗರದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ವೃತ್ತಿ ಆರಂಭಿಸಿ ಬಳಿಕ ಪಿಎಸ್ಐ ಹುದ್ದೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರಾಮಾಪುರ, ಕೊಳ್ಳೇಗಾಲ, ಚಾಮರಾಜನಗರದಲ್ಲಿ ಪಿಎಸ್ಐ, ಪಿಐ ಆಗಿ ಪುಟ್ಟಸ್ವಾಮಿ ಕರ್ತವ್ಯ ನಿರ್ವಹಿಸಿದ್ದರು. ಜನಸ್ನೇಹಿ ಆಡಳಿತದಿಂದ ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದಾರೆ. ಅಕ್ರಮ ಮದ್ಯ ಮಾರಾಟದ ವಿರುದ್ಧ ತೆಗೆದುಕೊಂಡ ಕಠಿಣ ಕ್ರಮಗಳಿಂದ ಮಹಿಳಾ ಅಭಿಮಾನಿಗಳ ಬಳಗವು ಇವರಿಗೆ ತುಸು ಹೆಚ್ಚಿದೆ. ಇದನ್ನೇ ಲಾಭವಾಗಿ ಮಾಡಿಕೊಂಡು ಚುನಾವಣೆಯಲ್ಲಿ ಗೆಲುವು ಸಾಧಿಸುವ ಪಣ ತೊಟ್ಟಿದ್ದಾರೆ.
ಇದನ್ನೂ ಓದಿ: ಕೋಲಾರ ಡಿಸಿಸಿ ಬ್ಯಾಂಕ್ನಲ್ಲಿ ನೂರಾರು ಕೋಟಿ ರೂಪಾಯಿ ಅವ್ಯವಹಾರ: ವರ್ತೂರು ಪ್ರಕಾಶ್ ಆರೋಪ