ಚಾಮರಾಜನಗರ : ಪೊಲೀಸರು ಬೈಕ್ ಅಡ್ಡ ಹಾಕಿದ ಕೂಡಲೇ ಜೇಬಿಗೆ ಕತ್ತರಿ ಬಿತ್ತು ಎಂದುಕೊಳ್ಳುತ್ತಿದ್ದವರಿಗೆ ಇಂದು ಶಾಕ್ ಕಾದಿತ್ತು. ಏಕೆಂದರೆ, ಪ್ರಕರಣವೇನೋ ದಾಖಲಾಯ್ತು. ಆದರೆ, ಹಣ ಮಾತ್ರ ಕಟ್ಟಿಸಿಕೊಳ್ಳದ ಘಟನೆ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ನಡೆಯಿತು.
ಸಂತೇಮರಹಳ್ಳಿ ಪಿಎಸ್ಐ ತಾಜುದ್ದಿನ್ ನೇತೃತ್ವದಲ್ಲಿ ಇಂದು ಟ್ರಾಫಿಕ್ ನಿಯಮ ಉಲ್ಲಂಘಿಸಿದ ಸವಾರರಿಂದ ದಂಡ ಕಟ್ಟಿಸಿಕೊಳ್ಳುವ ಬದಲು ಗುಲಾಬಿ ಹೂಗಳನ್ನು ಕೊಟ್ಟು ಪೊಲೀಸರು ಪ್ರೇಮಿಗಳ ದಿನಾಚರಣೆ ನಾಳೆ ಬರುತ್ತಿದೆ ಎಂದಿದ್ದಾರೆ. ಆದರೆ, ಬೈಕ್ ಸವಾರರು ಎಂದಿಗೂ ಹೆಲ್ಮೆಟ್ ಪ್ರೀತಿಸಬೇಕು. ಧರಿಸಬೇಕು ಎಂದು ಶಿರಸ್ತ್ರಾಣದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
50ಕ್ಕೂ ಹೆಚ್ಚು ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ಠಾಣೆಯ ಕೈತೋಟದಲ್ಲೇ ಬೆಳೆದ ಹೂಗಳನ್ನು ಕೊಟ್ಟು ದಂಡದಿಂದ ಮಾಫಿ ಮಾಡಿದ ತಾಜುದ್ದಿನ್, ಪೊಲೀಸರು ದಂಡ ಕಟ್ಟಿಸಿಕೊಳ್ಳುತ್ತಾರೆ ಎಂದು ಬೇಸರಿಸಿಕೊಳ್ಳಬೇಡಿ.
ಹೆಲ್ಮೆಟ್ ಧಾರಣೆಯಿಂದ ಅಪಘಾತಗಳಲ್ಲಿ ತಲೆಗೆ ತೀವ್ರ ಹಾನಿಯಾಗಿ ಮೃತಪಡುವುದನ್ನು ತಪ್ಪಿಸಬಹುದಾಗಿದೆ. ಹೆಲ್ಮೆಟ್ ಪ್ರೀತಿಸಿ-ಹೆಲ್ಮೆಟ್ ಧರಿಸಿ ಎಂದು ಸವಾರರಿಗೆ ಅರಿವು ಮೂಡಿಸಿ ಗಮನ ಸೆಳೆದಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರು ಸೇರಿದಂತೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಓದಿ: ಬಿಜೆಪಿಗೆ ವಲಸೆ ಹೋದ ಶಾಸಕರು ಕಾಂಗ್ರೆಸ್ಗೆ ಬಂದೇ ಬರ್ತಾರೆ : ಸತೀಶ್ ಜಾರಕಿಹೊಳಿ