ಚಾಮರಾಜನಗರ: ನಿವೇಶನ ಮಾರಾಟದ ಹಣ ಬಾಕಿ ಉಳಿಸಿಕೊಂಡು ನೀಡದಿದ್ದರಿಂದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಗಂಗಾಮತಸ್ತರ ಬೀದಿಯ ಪಿ.ಭಾಸ್ಕರ್(50) ಮೃತ ದುರ್ದೈವಿ. 2017ರಲ್ಲಿ ನಗರಸಭಾ ಸದಸ್ಯ ಆರ್.ಎಂ.ರಾಜಪ್ಪ ತಾಲೂಕು ಕಚೇರಿಯ ಪಕ್ಕದ ನಿವೇಶನ ಖರೀದಿಸಿ ಭಾಸ್ಕರ್ ಅವರಿಗೆ 25 ಲಕ್ಷ ರೂ. ಬಾಕಿ ಹಾಗೂ ಮಗನಿಗೆ ನೌಕರಿಗೆ ಕೊಡಿಸುವ ಭರವಸೆ ನೀಡಿದ್ದರು ಎನ್ನಲಾಗಿದೆ.
ಬಾಕಿ ಹಣವನ್ನು ಕೇಳಿದಾಗಲೆಲ್ಲ ಸಬೂಬು ಹೇಳುತ್ತಿದ್ದ ರಾಜಪ್ಪ ಕೆಲ ದಿನಗಳ ಹಿಂದೆ ಯಾವುದೇ ಬಾಕಿ ಹಣವನ್ನು ಕೊಡುವುದಿಲ್ಲ ಎಂದು ದಬಾಯಿಸಿ ಕಳಿಸಿದ್ದರಂತೆ. ಇದರಿಂದ ಮನನೊಂದು ಕ್ರಿಮಿನಾಶಕ ಸೇವಿಸಿ ಮೃತಪಟ್ಟಿದ್ದಾರೆ. ಪತಿ ಸಾವಿಗೆ ನಗರಸಭಾ ಸದಸ್ಯ ಆರ್.ಎಂ.ರಾಜಪ್ಪ ಅವರೇ ಕಾರಣವೆಂದು ಪತ್ನಿ ಪುಷ್ಪ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸದ್ಯ, ಪೊಲೀಸರು ರಾಜಪ್ಪ ಹಾಗೂ ಖರೀದಿಯ ಮಧ್ಯಸ್ಥಿಕೆ ವಹಿಸಿದ್ದ ಗಂಗಾಮತಸ್ಥರ ಬೀದಿಯ ಪ್ರಕಾಶ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.