ಕೊಳ್ಳೇಗಾಲ : ಸಂವಿಧಾನದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪ್ರತಿಯೊಬ್ಬರು ಕಾನ್ಸಿರಾಂ ಸಿದ್ಧಾಂತವನ್ನು ಮುಂದುವರೆಸಬೇಕು ಎಂದು ನಟ ಚೇತನ್ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಹುಜನ ಸಮಾಜ ಪಕ್ಷದ ವತಿಯಿಂದ ಆಯೋಜಿಸಿದ್ದ ದಾದಾಸಾಹೇಬ್ ಕಾನ್ಸಿರಾಂ ಅವರ 15ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಬಳಿಕ ಮಾತನಾಡಿದರು.
ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಪೆರಿಯಾರ್ ಬಳಿಕ 20ನೇ ಶತಮಾನದಲ್ಲಿ ಬಹುಜನ ಚಳವಳಿಗೆ ಅತ್ಯುನ್ನತವಾಗಿ ಕೆಲಸ ಮಾಡಿದವರೆಂದರೆ ಕಾನ್ಸಿರಾಂ ಆಗಿದ್ದಾರೆ. ಇವರ ಹೋರಾಟದಲ್ಲಿದ್ದ ಸಿದ್ಧಾಂತದಲ್ಲಿ ಬಹುಜನ ಶಕ್ತಿ ಹೇಗೆ ಕಟ್ಟಬಹುದು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದರು.
ಕಾನ್ಸಿರಾಂ ರಾಜಕಾರಣದಲ್ಲಿ ಎಸ್ಸಿ-ಎಸ್ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಹಾಗೂ ಇನ್ನಿತರ ಜಾತಿಗಳ ಮಹಿಳೆಯರನ್ನು ಒಗ್ಗೂಡಿಸಿ ಬಹುಜನ ಶಕ್ತಿ ಕಟ್ಟಿಕೊಂಡು ಸಾಮಾಜಿಕ ಹಾಗೂ ಆರ್ಥಿಕ ನ್ಯಾಯಗಳಿಸಿ ಸಮಾನತೆ ಪಡೆಯಬಹುದಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ನಾವೆಲ್ಲಾ ಅವರ ಕನಸನ್ನು ನನಸು ಮಾಡುವ ಪ್ರಯತ್ನ ಮಾಡಬೇಕೆಂದು ತಿಳಿಸಿದರು.
ಬೇಧ-ಭಾವ ಮಾಡಿದರೆ ನಾವು ಒಪ್ಪಲ್ಲ : ಇತ್ತೀಚೆಗೆ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಮಾಡುತ್ತಿದ್ದೀರಾ ಏಕೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಸಿದ ಅವರು, ಅಂಬೇಡ್ಕರ್, ಪೆರಿಯಾರ್ ಹಾಗೂ ಕಾನ್ಸಿರಾಂ ಸಿದ್ಧಾಂತಗಳು ಯಾವ ರೀತಿ ಬ್ರಾಹ್ಮಣ್ಯ ಮತ್ತು ಬೇಧ-ಭಾವದ ವಿರುದ್ಧ ಇದ್ದವೋ.. ಹಾಗೆಯೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಇನ್ನಿತರ ಯಾವುದೇ ಪಕ್ಷ ಬೇಧ-ಭಾವ ಮಾಡಿದರೆ ಅದನ್ನು ನಾವು ಒಪ್ಪುವುದಿಲ್ಲ. ಸಂವಿಧಾನದಡಿ ಸಮಾನತೆ, ನ್ಯಾಯಕ್ಕಾಗಿ ಹೋರಾಟ ಮಾಡಿ ನ್ಯಾಯ ಕೇಳುತ್ತೇವೆ ಎಂದರು.