ಚಾಮರಾಜನಗರ: ಈ ವೃದ್ಧೆಯ ವಯಸ್ಸು ಬರೋಬ್ಬರಿ 102 ವರ್ಷ, ಮೂರು ಮಕ್ಕಳ ಈ ತಾಯಿಗೆ 10 ಮಂದಿ ಮೊಮ್ಮಕ್ಕಳು, 12 ಮರಿ ಮೊಮ್ಮಕ್ಕಳಾದರೂ ತನ್ನಿಂದ ಭೂಮಿಗೆ ಬಂದ ಮಕ್ಕಳು ನೂರಾರು. ಚಾಮರಾಜನಗರ ತಾಲೂಕಿನ ಮುತ್ತಿಗೆ ಗ್ರಾಮದ ಹೊಂಬಾಳೆ ಪುಟ್ಟಮ್ಮ ಎಂಬುವವರು ಅದೆಷ್ಟೋ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದಾರೆ. ಓದು ಬರಹ ಬರದಿದ್ದರೂ ನಾಟಿ ವೈದ್ಯೆಯಂತೆ ಕೆಲಸ ಮಾಡಿ ಜೀವ ರಕ್ಷಿಸಿದ್ದಾರೆ.
ಶತಾಯುಷಿ ಆಗಿರುವ ಹೊಂಬಾಳೆ ಪುಟ್ಟಮ್ಮ ಅವರು ಕಳೆದ 6 ವರ್ಷಗಳಿಂದ ಮಗಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಎಷ್ಟೇ ಆದರೂ ಹುಟ್ಟಿದ ಊರಿನ ಸೆಳೆತ ಬಿಡದಿದ್ದರಿಂದ ತಮ್ಮೂರು ನೋಡಲು ಬಂದ ಪುಟ್ಟಮ್ಮನಿಗೆ ಗ್ರಾಮಸ್ಥರು ಸನ್ಮಾನ ಮಾಡಿ, ಅವರ ಸೇವೆಯನ್ನು ಹಾಡಿ ಹೊಗಳಿದ್ದಾರೆ.
ಕಾಯಿಲೆಗೂ ಕೊಡ್ತಿದ್ರೂ ಔಷಧ: ಮಕ್ಕಳಿಗೆ ಏನಾದರೂ ಕಾಯಿಲೆ ಬಂದಲ್ಲಿ ನಾರು, ಬಳ್ಳಿಗಳಿಂದ ನಾಟಿ ಔಷಧ ಮಾಡಿ ಗುಣಪಡಿಸುವ ನಾಟಿ ವೈದ್ಯೆಯಾಗಿಯೂ ಪ್ರಸಿದ್ದಿ ಪಡೆದಿದ್ದಾರೆ. ಇವರ ಕೈಗುಣ ಇಂದಿನ ವೈದ್ಯರನ್ನೂ ಮೀರಿಸುವಂತಿದೆ. ಹೊಂಬಾಳೆ ಪುಟ್ಟಮ್ಮ ಹೆರಿಗೆ ಕಸುಬನ್ನು ಮಾತ್ರವಲ್ಲದೇ ಗ್ರಾಮದಲ್ಲಿ ಆ ಕಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಮಾಲೆ, ಸಿಡುಬು, ವಾಂತಿ, ಭೇದಿ, ಜ್ವರ ಇನ್ನಿತರ ಕಾಯಿಲೆಗಳಿಗೆ ಔಷಧ ನೀಡಿ ಗುಣಪಡಿಸುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಇಲ್ಲಿನ ಗ್ರಾಮಸ್ಥರು.
500 ಹೆರಿಗೆ ಮಾಡಿಸಿದ ಖ್ಯಾತಿ: 500 ಕ್ಕೂ ಹೆಚ್ಚು ಹೆರಿಗೆ ಮಾಡಿಸಿರುವ ಪುಟ್ಟಮ್ಮ ಅವರು ತನ್ನ ಕೈಯಲ್ಲಿ ಹುಟ್ಟಿದ ಮಕ್ಕಳು ಈಗಲೂ ಇಂತಹವರ ಮಕ್ಕಳೇ ಎಂದು ಗುರುತು ಹಿಡಿಯುವ ಅಗಾಧವಾದ ನೆನಪಿನ ಶಕ್ತಿ ಹೊಂದಿದ್ದಾರೆ. ಈಗಿನ ಕಾಲದಲ್ಲಿ ಹೆರಿಗಾಗಿ ಸಾವಿರಾರು ರೂಪಾಯಿ ಖರ್ಚುಮಾಡಬೇಕಾದ ಬಡವರು ಅಂದು ನಯಾಪೈಸೆ ಪಡೆಯದೇ ಸಾವಿರಾರು ಹೆಣ್ಮಕ್ಕಳಿಗೆ ಉಚಿತವಾಗಿ ಹೆರಿಗೆ ಮಾಡಿಸಿ ನಾಟಿ ವೈದ್ಯೆ ಎನಿಸಿಕೊಂಡ ಹೊಂಬಾಳೆ ಪುಟ್ಟಮ್ಮರ ಸಾಧನೆ ಹೆಮ್ಮೆಯೇ ಸರಿ.
ಓದಿ: 74 ವರ್ಷಗಳ ಬಳಿಕ ಮತ್ತೆ ಒಂದಾದ ಬಟಿಂಡಾ ಸಹೋದರರು.. ಒಗ್ಗೂಡಿಸಿದ ಸೋಷಿಯಲ್ ಮೀಡಿಯಾ