ಕೊಳ್ಳೇಗಾಲ: ತಾಲೂಕಿನ ಸಿದ್ದಯ್ಯನಪುರ ಗ್ರಾಮದ 1ನೇ ವಾರ್ಡ್ನಲ್ಲಿ ಸಾಮಾನ್ಯ ಹಾಗೂ ಸಾಮಾನ್ಯ ಮಹಿಳೆ ಸ್ಥಾನ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಜಾತಿ ಮಹಿಳೆ ಸೇರಿ ಒಟ್ಟು 4 ಸ್ಥಾನಗಳ ಪೈಕಿ ಕೇವಲ ಎಸ್ಸಿ ಮತ್ತು ಎಸ್ಸಿ ಮಹಿಳಾ ಸ್ಥಾನಕ್ಕೆ ಮಾತ್ರ ಒಟ್ಟು 11 ಜನರು ನಾಮಪತ್ರ ಸಲ್ಲಿಸಿದ್ದಾರೆ.
ಈ ನಡುವೆ ಅಭ್ಯರ್ಥಿಗಳು ಚುನಾವಣಾ ಪ್ರಚಾರದ ವೇಳೆ ನಾಲ್ಕು ಮತ ಚಲಾಯಿಸಲು ಅವಕಾಶವಿದ್ದು ತಿಳಿದು ಅದರಂತೆ ಮತಯಾಚಿಸಿದ್ದರು. ಆದರೆ, ಎರಡೇ ಮತದಾನ ಮಾಡುವ ಅವಕಾಶ ಮಾತ್ರ ಇರುವುದರಿಂದ ಗೊಂದಲದಲ್ಲಿರುವ ಗ್ರಾಮಸ್ಥರು ಮತದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಚುನಾವಣೆ ಪ್ರಾರಂಭವಾಗಿ 4 ಗಂಟೆಯಾದರೂ ಒಬ್ಬರೂ ಮತ ಹಾಕಿಲ್ಲ.
ಅಷ್ಟೇ ಅಲ್ಲದೆ ಪ್ರತಿವರ್ಷವೂ ನಾಲ್ಕು ಜನರನ್ನು ಆಯ್ಕೆ ಮಾಡುತ್ತಿದ್ದ ಮತದಾರರಿಗೆ ಈ ಬಾರಿ ಎರಡು ಮತದಾನ ಮಾಡುವಂತೆ ದಿಢೀರನೆ ಬದಲಾವಣೆಯಾಗಿದ್ದು, ಇಂದು ಮತಗಟ್ಟೆಗೆ ಬಂದ ಜನರಿಗೆ ಕೇವಲ 2 ಮತ ಚಲಾಯಿಸಲು ಅವಕಾಶವಿದೆ ಎಂಬುದನ್ನು ತಿಳಿದು ಬೇಸರಗೊಂಡು ಮತದಾನ ಬಹಿಷ್ಕಾರ ಮಾಡಿದ್ದಾರೆ.
ಈ ಕುರಿತು ತಹಶೀಲ್ದಾರ್ ಕುನಾಲ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗ್ರಾಮಕ್ಕೆ ಆಗಮಿಸಿ ಜನರನ್ನು ಮನವೊಲಿಸುವ ಪ್ರಯತ್ನದಲ್ಲಿದ್ದಾರೆ. ಆದರೆ, ಜನರು ನಾವು ಮತದಾನ ಮಾಡುವುದಿಲ್ಲ. ಮತಗಟ್ಟೆ ಚುನಾವಣಾಧಿಕಾರಿ ರಮೇಶ್ ಅವರು ನಮಗೆ ಸಮರ್ಪಕ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಇನ್ನೂ ಗ್ರಾಮದಲ್ಲಿ ಮತದಾನ ಬಹಿಷ್ಕಾರ ಪ್ರತಿಭಟನೆ ನಡೆಸಿದ್ದು, ವಿಷಯ ತಿಳಿದು ಗ್ರಾಮಕ್ಕೆ ಡಿಸಿ ಎಂ.ಆರ್. ರವಿ ಹಾಗೂ ಎಎಸ್ಪಿ ಅನಿತಾ ಭೇಟಿ ನೀಡಿ ಪರಿಶೀಲನೆಯಲ್ಲಿ ತೊಡಗಿದ್ದು ಎರಡು ಗಂಟೆಗಳ ಕಾಲ ಮನವೊಲಿಸಲು ಎಷ್ಟೇ ಪ್ರಯತ್ನ ಮಾಡಿದರೂ ಗ್ರಾಮಸ್ಥರು ಮಾತ್ರ ನಾಲ್ಕು ಮತದಾನ ಮಾಡುವ ಹಕ್ಕು ನೀಡಬೇಕು ಎಂದು ಪಟ್ಟು ಹಿಡಿಯುವ ಮೂಲಕ ಮತದಾನ ಬಹಿಷ್ಕಾರ ಮಾಡಿದ್ದಾರೆ.