ಗುಂಡ್ಲುಪೇಟೆ: ಗ್ರಾಮ ಪಂಚಾಯತ್ ಚುನಾವಣೆ ಗೆಲ್ಲಲು ಬಿಜೆಪಿ ಶಾಸಕ ಸಿ.ಎಸ್. ನಿರಂಜನಕುಮಾರ ಪಿಡಿಒಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗ್ರಾಮ ಪಂಚಾಯತ್ ಅಧಿಕಾರ ಹಿಡಿಯಲು ವಾಮಮಾರ್ಗ ಅನುಸರಿಸುತ್ತಿದ್ದಾರೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಮಧುಶಂಕರ ಎಸ್.ಎಸ್. ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಫಲಾನುಭವಿಗಳಿಗೆ ನೀಡಿರುವ ಮನೆಗಳ ಕಾರ್ಯವೇ ಸಂಪೂರ್ಣವಾಗಿಲ್ಲ. ಹೀಗಿರುವಾಗ ವಸತಿ ಸಚಿವ ವಿ. ಸೋಮಣ್ಣ ಅವರ ಲೆಟರ್ ಹೆಡ್ ಬಳಸಿ ಮತದಾರರಿಗೆ ಮನೆ ನೀಡುವ ಆಮಿಷವೊಡ್ಡುತ್ತಿದ್ದಾರೆ. ಒಂದು ಗ್ರಾಮ ಪಂಚಾಯತ್ಗೆ ಶಾಸಕರ ಕೋಟಾದಡಿ 20 ಮನೆ ನೀಡುವುದಾಗಿ ಹಾಗೂ ಮನೆಗಳನ್ನು ಶಾಸಕರೇ ಆಯ್ಕೆ ಮಾಡುತ್ತಾರೆ ಎಂದು ಬಿಜೆಪಿ ಮುಖಂಡರು ಕೆಲ ಪಿಡಿಒಗಳ ಮೂಲಕ ಗ್ರಾಮಗಳಲ್ಲಿ ಪಟ್ಟಿ ಸಿದ್ಧಪಡಿಸುತ್ತಿದ್ದಾರೆ. ಎರಡು ಮೂರು ವರ್ಷದಿಂದ ಮನೆ ಕೊಟ್ಟಿರೋರಿಗೆ ಸರ್ಕಾರ ಇನ್ನೂ ಸಹ ಹಣ ನೀಡಿಲ್ಲ. ಇಂತಹ ಸಂದರ್ಭದಲ್ಲಿ ಮತದಾರರನ್ನು ವಂಚಿಸುವ ಕೆಲಸವನ್ನು ಬಿಜೆಪಿಗರು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ತಾಲೂಕು ಪಂಚಾಯತ್ ಆಡಳಿತದ ಗಮನಕ್ಕೆ ಬಾರದೆ ಫಲಾನುಭವಿಗಳಿಗೆ ಮನೆ ತಲುಪಲು ಸಾಧ್ಯವಿಲ್ಲ. ಹಾಗಾಗಿ ಜನರೂ ಕೂಡ ಬಿಜೆಪಿಗರ ಗ್ರಾಮ ಪಂಚಾಯತ್ ಚುನಾವಣೆಯ ಈ ಆಮಿಷಕ್ಕೆ ಬಲಿಯಾಗಬಾರದು. ಈ ಬಗ್ಗೆ ಜಿಲ್ಲಾ ಪಂಚಾಯತ್ ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.
ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಹೆಚ್.ಎನ್. ನಟೇಶ ಮಾತನಾಡಿ, ಆಡಳಿತಾಧಿಕಾರಿ ಹಾಗೂ ಪಿಡಿಒ ಸಮ್ಮುಖದಲ್ಲಿ ಮನೆ ಆಯ್ಕೆ ನಡೆಯಬೇಕು. ಸರ್ಕಾರವು ಆಡಳಿತಾಧಿಕಾರಿ ನೇಮಕ ಮಾಡಿದ್ದು, ಬಡವರಿಗೆ ಮನೆ ಸಿಗುವ ವಿಚಾರದಲ್ಲಿ ಅನುಮಾನ ಕಾಡುತ್ತಿದೆ. ಆಡಳಿತಾಧಿಕಾರಿ ಮೂಲಕ ಭ್ರಷ್ಟಾಚಾರಕ್ಕೆ ಬಿಜೆಪಿ ಮುಂದಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು. ಯಾವುದೇ ಫಲಾನುಭವಿಗೆ ಮನೆ ನೀಡುವ ಮುನ್ನ ಮನೆ ಆಯ್ಕೆ ಮಾಡಲು ಗುರಿ ನಿಗಧಿ ಪಡಿಸಬೇಕು, ಗುರಿಯನ್ನೇ ನೀಡದೆ ಯಾರಿಗೆ ಬಿಜೆಪಿಯವರು ಮನೆ ಕೊಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.