ಗುಂಡ್ಲುಪೇಟೆ (ಚಾಮರಾಜನಗರ): ತಾಲೂಕಿನ ತೆರಕಣಾಂಬಿ ಗ್ರಾಮದ ಪದವಿ ಕಾಲೇಜು ಸ್ಥಳಾಂತರ ಖಂಡಿಸಿ ಕಾಲೇಜು ವಿದ್ಯಾರ್ಥಿಗಳು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕಾಂಗ್ರೆಸ್ ಪಕ್ಷ, ಬಿಎಸ್ಪಿ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು ಒಟ್ಟಾಗಿ ಸೇರಿ ಪಕ್ಷಾತೀತವಾಗಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರಥಮ ದರ್ಜೆ ಕಾಲೇಜು ಮುಂಭಾಗ ಪ್ರತಿಭಟನೆ ಆರಂಭಿಸಿದ ಕಾಲೇಜು ವಿದ್ಯಾರ್ಥಿಗಳು, ನಂತರ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ತೆರಕಣಾಂಬಿ ಮುಖ್ಯ ರಸ್ತೆಯಲ್ಲಿ ಜಾಥಾ ನಡೆಸಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಸಮಾವೇಶಗೊಂಡರು. ಈ ವೇಳೆ ಸ್ಥಳೀಯ ಶಾಸಕ ಸಿ.ಎಸ್.ನಿರಂಜನಕುಮಾರ್ ಹಾಗೂ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕಾಂಗ್ರೆಸ್ ಯುವ ಮುಖಂಡ ಗಣೇಶ್‍ಪ್ರಸಾದ್ ಮಾತನಾಡಿ, ಕ್ಷೇತ್ರಕ್ಕೆ ಒಂದು ಕಾಲೇಜು ತರುವುದು ಬಹಳ ಕಷ್ಟದ ಕೆಲಸವಾಗಿದ್ದು, ಇದಕ್ಕೆ ಹೆಚ್ಚಿನ ರೀತಿಯ ಶ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ತಾಲೂಕು ಹಾಗೂ ತೆರಕಣಾಂಬಿ ಹೋಬಳಿಯ ಅಭಿವೃದ್ಧಿ ದೃಷ್ಟಿಯಿಂದ ಮಹದೇವಪ್ರಸಾದ್ ಅವರು ಸಚಿವರಾಗಿದ್ದ ವೇಳೆ ಕಾಲೇಜಿಗೆ ಮಂಜೂರಾತಿ ತಂದಿದ್ದರು. ನಂತರ ಗೀತಾ ಮಹದೇವಪ್ರಸಾದ್ ಸರ್ಕಾರದ ಮೇಲೆ ಒತ್ತಡ ತಂದು 3.5 ಕೋಟಿ ಅನುದಾನ ಬಿಡುಗಡೆ ಮಾಡಿಸಿ, ಹೊಸ ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದ್ದರು. ಅದು ಉದ್ಘಾಟನೆಗೂ ಮುನ್ನವೇ ಸ್ಥಳಾಂತರ ಆದೇಶ ಬಂದಿರುವುದು ದುರದೃಷ್ಟಕರ ಎಂದರು.
ಸ್ಥಳೀಯ ಶಾಸಕರಾದ ಸಿ.ಎಸ್. ನಿರಂಜನಕುಮಾರ್ ಕಾಲೇಜು ಉಳಿಸಿಕೊಳ್ಳಲು ವಿಫಲವಾಗಿದ್ದಾರೆ. ರಾಜ್ಯದಲ್ಲಿ ಅವರದ್ದೆ ಬಿಜೆಪಿ ಸರ್ಕಾರ ಇದ್ದರೂ ಸಹ ಕಾಲೇಜು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರದೆ ನಿರ್ಲಕ್ಷ್ಯ ವಹಿಸಿದ್ದಾರೆ. ಜೊತೆಗೆ ಅಭಿವೃದ್ಧಿ ಕುಂಠಿತವಾಗಿದ್ದು, ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.