ಚಾಮರಾಜನಗರ: ಇಂದು ಹೊಸದಾಗಿ 33 ಪಾಸಿಟಿವ್ ಕೇಸ್ಗಳು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 624ಕ್ಕೆ ಏರಿಕೆಯಾಗಿದ್ದು, 37 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 211ರಷ್ಟಾಗಿದ್ದು, ಇಲ್ಲಿಯವರೆಗೆ 406 ಮಂದಿ ಬಿಡುಗಡೆ ಆಗಿದ್ದಾರೆ. 473 ಮಂದಿ ಮೇಲೆ ನಿಗಾ ಇರಿಸಲಾಗಿದ್ದು, ಆರ್ಟಿಪಿಸಿಆರ್ ಲ್ಯಾಬ್ನಲ್ಲಿ 56 ಮಂದಿಯದ್ದು, ರ್ಯಾಪಿಡ್ ಆ್ಯಂಟಿಜೆನ್ ಮೂಲಕ 542 ಮಂದಿಯ ಕೋವಿಡ್ ಪರೀಕ್ಷೆ ನಡೆಸಲಾಗಿದೆ.
ಇಂದು ಸೋಂಕಿತರಾದವರಲ್ಲಿ 70 ವರ್ಷ ಮೇಲ್ಪಟ್ಟವರು 5 ಮಂದಿಯಿದ್ದು, 60 ವರ್ಷ ಮೇಲ್ಪಟ್ಟ ಮೂವರಿದ್ದಾರೆ. 13 ಹಾಗೂ 8 ವರ್ಷದ ಮಕ್ಕಳಿಗೂ ಕೊರೊನಾ ತಗುಲಿದೆ. ಗುಂಡ್ಲುಪೇಟೆ- 197, ಚಾಮರಾಜನಗರ- 135, ಕೊಳ್ಳೇಗಾಲ- 186, ಹನೂರು- 35, ಯಳಂದೂರು- 58 ಹಾಗೂ ಇತರೆ ಜಿಲ್ಲೆಯವರಾದ 13 ಮಂದಿಯಲ್ಲಿ ಇಲ್ಲಿಯವರೆಗೆ ಸೋಂಕು ದೃಢಪಟ್ಟಿದೆ.
ಮಹಿಳೆ ಸಾವು:
ಚಾಮರಾಜನಗರ ತಾಲೂಕಿನ ಜಾಲಹಳ್ಳಿ ಹುಂಡಿಯ 48 ವರ್ಷದ ಮಹಿಳೆಯೊಬ್ಬರು ಇಂದು ಕೋವಿಡ್ ಆಸ್ಪತ್ರೆಯಲ್ಲಿ ಮೃತಪಡುವ ಮೂಲಕ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಇವರು ಮಧುಮೇಹದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದ್ದು, ಕಳೆದ ಜುಲೈ 26ರಿಂದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಮೃತರ ಅಂತ್ಯಸಂಸ್ಕಾರವನ್ನು ಪಿಎಫ್ಐ ಸಂಘನೆಯ ಕಾರ್ಯಕರ್ತರು ಗೌರವಯುತವಾಗಿ ನಿಗದಿಪಡಿಸಿರುವ ಸರ್ಕಾರಿ ಭೂಮಿಯಲ್ಲಿ ನೆರವೇರಿಸಿದ್ದಾರೆ. ಮೃತರ ಮಕ್ಕಳು ದೂರದಿಂದಲೇ ನಿಂತು ಪೂಜಾ ವಿಧಿವಿಧಾನ ನೆರವೇರಿಸಿದ್ದಾರೆ.
ಸೋಂಕಿತ ವಿದ್ಯಾರ್ಥಿಗೆ ಪ್ರತ್ಯೇಕ ಪರೀಕ್ಷೆ: ಪಿಯು ವಿದ್ಯಾರ್ಥಿನಿಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಆಕೆಯನ್ನು ಮೆಡಿಕಲ್ ಕಾಲೇಜಿನಲ್ಲೇ ಪ್ರತ್ಯೇಕವಾಗಿ ಪರೀಕ್ಷೆ ಬರೆಸಲಾಗಿದೆ.