ಚಾಮರಾಜನಗರ: ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ನೆರವಿಗೆ ಗಡಿಜಿಲ್ಲೆ ಚಾಮರಾಜನಗರ ಜನತೆ ಧಾವಿಸಿದ್ದು, ಗೋಕಾಕ್, ಅಥಣಿ ಮತ್ತು ಚಿಕ್ಕೋಡಿ ಭಾಗದ ಜನರಿಗೆ ಒಂದು ಲಕ್ಷ ಚಪಾತಿ ನೀಡಲು ಮುಂದಾಗಿದ್ದಾರೆ.
ನಗರದ ಗಾನಕವಿ ಫೌಂಡೇಷನ್, ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ವಿವಿಧ ಶಾಲಾ ಸಂಸ್ಥೆಗಳು ಸಂಯುಕ್ತವಾಗಿ ಒಂದು ಲಕ್ಷ ಡ್ರೈ ಚಪಾತಿ ಹಾಗೂ 150 ಕೆಜಿ ಚಟ್ನಿಪುಡಿ ತಯಾರಿಸಿ ಸ್ವತಃ ಕಾರ್ಯಕರ್ತರೇ ತೆರಳಿ ಸಂತ್ರಸ್ತರಿಗೆ ನೀಡಲಿದ್ದಾರೆ. ಈಗಾಗಲೇ 70 ಸಾವಿರಕ್ಕೂ ಹೆಚ್ಚು ಚಪಾತಿಗಳು ತಯಾರಾಗಿದ್ದು, ಶಾಲಾ ಮಕ್ಕಳು ಕೂಡ ಮನೆಯಿಂದ ಚಪಾತಿ ತಯಾರಿಸಿ ನೀಡಿದ್ದಾರೆ. 4 ಚಪಾತಿ ಮತ್ತು ಚಟ್ನಿಪುಡಿಯನ್ನು ಫಾಯಿಲ್ ಕವರ್‌ನಲ್ಲಿ ಹಾಕುತ್ತಿದ್ದು, 10 ದಿನಗಳ ಕಾಲ ಕೆಡುವುದಿಲ್ಲ ಎಂದು ಅಂದಾಜಿಸಲಾಗಿದೆ.
ಮಳೆ ಹಾಗೂ ಭಾರಿ ಪ್ರವಾಹದಿಂದ ಉತ್ತರ ಕರ್ನಾಟಕದ ನಮ್ಮ ಬಂಧುಗಳು ತಮ್ಮ ಮನೆ, ಆಸ್ತಿ, ಪಾಸ್ತಿಗಳನ್ನು ಕಳೆದುಕೊಂಡು ತೀವ್ರವಾದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಅವರಿಗೆ ನಮ್ಮ ಕೈಲಾದ ಸಹಾಯವನ್ನು ಮಾಡಬೇಕಾದದ್ದು ನಮ್ಮ ಕರ್ತವ್ಯ ಎಂದರು. ಚಾಮರಾಜನಗರದ ಜನತೆ ಕೂಡ ನಿಮ್ಮೊಂದಿಗಿದ್ದೇವೆ ಎಂಬ ಅಭಿಯಾನದೊಂದಿಗೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಿಂದ ಒಂದು ಲಕ್ಷ ಚಪಾತಿಯನ್ನು ನಾವೇ ಗೋಕಾಕ್, ಅಥಣಿ, ಚಿಕ್ಕೋಡಿಗೆ ಸಂತ್ರಸ್ತರಿಗೆ ವಿತರಿಸುತ್ತೇವೆ ಎಂದು ಗಾನಕವಿ ಫೌಂಡೇಶನ್ ಅಧ್ಯಕ್ಷ ಹೆಚ್ ಬಿ ವಿಶ್ವಕುಮಾರ್ ತಿಳಿಸಿದರು.
ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಹ ಕಾರ್ಯದರ್ಶಿ ನಿಜಗುಣ ರಾಜೇಶ್ ಮಾತನಾಡಿ, ಇದೊಂದು ಒಳ್ಳೆಯ ಕಾರ್ಯ. ಇಂತಹ ಕಾರ್ಯಕ್ಕೆ ನಮ್ಮದೂ ಒಂದು ಅಲ್ಪ ಸಹಕಾರ ಇರಲಿ ಎಂದು ಈ ಚಪಾತಿ ತಯಾರಿಕೆಯಲ್ಲಿ ಭಾಗವಹಿಸುತ್ತಿದ್ದೇವೆ. ಹಲವಾರು ಶಾಲಾ ವಿದ್ಯಾರ್ಥಿಗಳು ಕೂಡ ಕೈ ಜೋಡಿಸಿದ್ದಾರೆ ಎಂದು ಎಂದು ಯೋಗ ಶಿಕ್ಷಕ ನಿಜಗುಣ ತಿಳಿಸಿದರು.