ಕೊಳ್ಳೇಗಾಲ : ಕೊರೊನಾ ದೃಢಪಟ್ಟ ವೃದ್ಧೆಯೊಬ್ಬರು ತನ್ನಿಂದ ಕುಟುಂಬದವರಿಗೆಲ್ಲಾ ಕೊರೊನಾ ಹರಡಿ ಬಿಡಬಹುದೆಂದು ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾಲೂಕಿನ ಇಕ್ಕಡಹಳ್ಳಿ ಗ್ರಾಮದ ಸಿದ್ದಮ್ಮ(70) ಮೃತ ದುರ್ದೈವಿ. ಇವರಿಗೆ ಮೇ1 ರಂದು ಜ್ವರ ಕಾಣಿಸಿದ್ಮೇಲೆ ಚಿಕಿತ್ಸೆ ಕೊಡಿಸಲಾಗಿತ್ತು. ಮಾ.3 ರಂದು ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ.
ವೈದ್ಯರ ಸಲಹೆಯಂತೆ ಹೋಂ ಐಸೋಲೇಟ್ ಆಗಿದ್ದ ಅವರು, ನನ್ನಿಂದ ನನ್ನ ಕುಟುಂಬಕ್ಕೂ ಕೊರೊನಾ ಹರಡಿ ಬಿಡುತ್ತದೆ ಎಂದು ಹೆದರಿ ನೇಣಿಗೆ ಕೊರಳೊಡ್ಡಿದ್ದಾರೆ.
ಸಿದ್ದಮ್ಮ ನನ್ನಿಂದ ಕೊರೊನಾ ನನ್ನ ಮೊಮ್ಮಕ್ಕಳಿಗೆ ಹರಡುವುದೋ ಎಂದು ಯೋಚಿಸುತ್ತ ಜಿಗುಪ್ಸೆಗೊಳಗಾಗಿದ್ದರು ಎನ್ನಲಾಗಿದೆ. ಇಂದು ವೃದ್ಧೆಯ ಕೊಠಡಿಗೆ ಕಾಫಿ ನೀಡಲು ಹೋದಾಗ ಪ್ಲಾಸ್ಟಿಕ್ ಹಗ್ಗದಿಂದ ಮನೆಯ ಮೇಲ್ಛಾವಣಿಯ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ವೃದ್ಧೆಯ ಮಗ ಸೀಗನಾಯಕ ನನ್ನ ತಾಯಿ ಕೊರೊನಾ ಜಿಗುಪ್ಸೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ವಿಚಾರ ತಿಳಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಶೋಕ್ ಹಾಗೂ ಸಿಬ್ಬಂದಿ ಶಿವಕುಮಾರ್ ಇನ್ನಿತರರು ಹಾಗೂ ವೈದ್ಯರು ಸ್ಥಳಕ್ಕೆ ದೌಡಾಯಿಸಿ ಕೊರೊನಾ ನಿಯಮಾವಳಿಯಂತೆ ಗ್ರಾಮದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.