ಚಾಮರಾಜನಗರ: ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಈವರೆಗೆ 13 ಮಂದಿ ರಾಜಕೀಯ ನಾಯಕರು ಸೇವೆ ಸಲ್ಲಿಸಿದ್ದಾರೆ. ಆದರೆ ಈವರೆಗೆ ಒಬ್ಬ ಸಚಿವರೂ ಐದು ವರ್ಷದ ಪೂರೈಸಿಲ್ಲ!
ಹೌದು, 1997ರಲ್ಲಿ ಚಾಮರಾಜನಗರ ಜಿಲ್ಲೆಯಾಗಿ ರಚನೆಯಾದಾಗಿನಿಂದ ಇಲ್ಲಿಯವರೆಗೂ ಯಾವುದೇ ಜಿಲ್ಲಾ ಉಸ್ತುವಾರಿ ಸಚಿವರೂ ಕೂಡ ಐದು ವರ್ಷ ಪೂರೈಸಿಲ್ಲ. ಅಲ್ಪ ಕಾಲದಲ್ಲಿಯೇ ಉಸ್ತುವಾರಿ ಸ್ಥಾನ ಕಳೆದುಕೊಂಡ ಸಚಿವರ ಸಾಲಿಗೆ ಇದೀಗ ಪುಟ್ಟರಂಗ ಶೆಟ್ಟಿ ಅವರೂ ಸೇರಿದ್ದಾರೆ.
![District Ministers](https://etvbharatimages.akamaized.net/etvbharat/prod-images/3948228_ggggh.jpg)
ಇತ್ತೀಚೆಗೆ ಪತನವಾದ ಕುಮಾರಸ್ವಾಮಿ ಸರ್ಕಾರದಲ್ಲಿ ಚಾಮರಾಜನಗರ ತಾಲೂಕಿನವರೇ ಆದ ಪುಟ್ಟರಂಗಶೆಟ್ಟಿ ಅವರಿಗೆ ಜಿಲ್ಲೆಯ ಉಸ್ತುವಾರಿ ಹೊಣೆ ನೀಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರಿ ಸ್ವೀಕರಿಸಿದ 14 ತಿಂಗಳಲ್ಲಿಯೇ ಅವರು ತಮ್ಮ ಸ್ಥಾನ ತೊರೆಯುವಂತಾಗಿದೆ. 1997ರಲ್ಲಿ ಮೊದಲ ಉಸ್ತುವಾರಿ ಸಚಿವರಾಗಿದ್ದ ನಾಗಪ್ಪರಿಂದ ಹಿಡಿದು, ಜಿ. ರಾಜೂಗೌಡ, ಬೆಂಕಿ ಮಹದೇವಪ್ಪ, ಡಿ.ಟಿ.ಜಯಕುಮಾರ್ ಹೆಚ್.ಎಸ್.ಮಹದೇವಪ್ರಸಾದ್, ಯು.ಟಿ.ಖಾದರ್, ಡಾ. ಗೀತಾ ಮಹದೇವಪ್ರಸಾದ್ ಸೇರಿದಂತೆ ಮತ್ಯಾರೂ ಪೂರ್ಣಾವಧಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಲಿಲ್ಲ.
ಸಿಎಂ ಚಾಮರಾಜನಗರಕ್ಕೆ ಬಂದ್ರೆ ಅಧಿಕಾರ ಕಳೆದುಕೊಳ್ತಾರೆ ಎಂಬ ಕಳಂಕ ಅಂಟಿತ್ತು. ಅದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ದೂರ ಮಾಡಿದ್ದರು. ಈ ಮಧ್ಯೆ, ಜಿಲ್ಲೆಯ ಉಸ್ತುವಾರಿ ಸಚಿವರು ಯಾರೂ ಐದು ವರ್ಷ ಪೂರ್ಣಗೊಳಿಸದೇ ಇರುವುದು ವಿಪರ್ಯಾಸವೇ ಸರಿ.