ಗುಂಡ್ಲುಪೇಟೆ: ಲಾಕ್ಡೌನ್ ಸಡಿಲಿಕೆ ಬಳಿಕ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿಗೆ ಅವಕಾಶವಿದ್ದರೂ ಜನರು ಮಾತ್ರ ಆಗಮಿಸುತ್ತಿಲ್ಲ.
ಜೂನ್ 8 ರಿಂದ ಲಾಕ್ಡೌನ್ ಸಡಿಲಿಕೆಗೊಳಿಸಿ ಸರ್ಕಾರ ಸೂಚಿಸಿದ ನಿಯಮಗಳನ್ನು ಪಾಲನೆ ಮಾಡಿಕೊಂಡು ಸಫಾರಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಕೋವಿಡ್ 19 ಭಯದಿಂದ ಪ್ರವಾಸಿಗರು ಸಫಾರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಮಾರ್ಚ್ ತಿಂಗಳಿನಿಂದ ಜೂನ್ ಅಂತ್ಯದ ವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ, ಕೊರೊನಾ ಭಯದಿಂದ ಜನರು ಆಗಮಿಸುತ್ತಿಲ್ಲ ಎಂದು ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ತಿಳಿಸಿದರು.
ವಸತಿ ಗೃಹಗಳು ಸಹ ಖಾಲಿ: ಇಲ್ಲಿ ಬಂಡೀಪುರದ ವಸತಿ ನಿಲಯಗಳು ಸೇರಿದಂತೆ, ಜಂಗಲ್ ಲಾಡ್ಜ್, ರೆಸಾರ್ಟ್, ಖಾಸಗಿ ಐಷಾರಾಮಿ ರೆಸಾರ್ಟ್, ಹೋಂ ಸ್ಟೇಗಳು ಇದ್ದು, ಎಲ್ಲವೂ ಬಿಕೋ ಎನ್ನುತ್ತಿದೆ. ವಸತಿ ನಿಲಯಗಳಿಗೆ ರಿಯಾಯಿತಿ ನೀಡಿದರೂ ಜನರು ಮಾತ್ರ ಸಫಾರಿಗೆ ಆಗಮಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೆಲ ಹೋಟೆಲ್ಗಳು ಬಂದ್ ಆಗಿವೆ ಎಂದು ಖಾಸಗಿ ರೆಸಾರ್ಟ್ ಮಾಲೀಕರೊಬ್ಬರು ತಿಳಿಸಿದ್ದಾರೆ.
ಪ್ರವಾಸಿಗರನ್ನೇ ನಂಬಿ ಜೀವನ ನಡೆಸುತ್ತಿದ್ದ ಅಂಗಡಿ ಮಾಲೀಕರು, ಕೂಲಿ ಕಾರ್ಮಿಕರು ಕಂಗಾಲಾಗಿದ್ದಾರೆ.