ಕೊಳ್ಳೇಗಾಲ: ಗ್ರಾ.ಪಂ ಚುನಾವಣೆಯಲ್ಲಿ ನನ್ನ ಬೆಂಬಲಿತ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ ಸ್ಪರ್ಧಿಗಳಲ್ಲಿ 115 ಮಂದಿ ಗೆದ್ದಿದ್ದಾರೆ. ಮುಂಬರುವ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ನನಗೆ ಬೆಂಬಲ ನೀಡುವಂತ ದೊಡ್ಡ ಶಕ್ತಿ ಇದಾಗಿದೆ. ಮುಂದಿನ ದಿನಗಳಲ್ಲಿ ಇನ್ನೊಂದು ದೊಡ್ಡ ಶಕ್ತಿ ನಮ್ಮ ಕೈಜೋಡಿಸುತ್ತಿದ್ದು, ಇಬ್ಬರೂ ಸೇರಿದರೆ 250- 280 ಅಭ್ಯರ್ಥಿಗಳಾಗುತ್ತಾರೆ. ಒಟ್ಟಾರೆ 30 ಗ್ರಾ.ಪಂ ಪೈಕಿ 20 ಪಂಚಾಯಿತಿಗಳನ್ನು ನಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಪಟ್ಟಣದ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಶಾಸಕ ಎನ್. ಮಹೇಶ್ ಬಳಗದ ವತಿಯಿಂದ ಆಯೋಜಿಸಿದ್ದ ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ ಸದಸ್ಯರ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ನಾವು ಅವರಿವರಂತೆ ಅಷ್ಟು ಗೆದ್ದಿದ್ದೇವೆ, ಇಷ್ಟು ಗೆದ್ದಿದ್ದೇವೆ ಎಂದು ಹೇಳುವುದಿಲ್ಲ. ನನ್ನ ಬೆಂಬಲಿಗರು ಗೆದ್ದಿರುವುದು 115 ಮಂದಿ, ಇವರಲ್ಲಿ ಎಲ್ಲರೂ ಬಹಿರಂಗವಾಗಿ ಸನ್ಮಾನ ಸ್ವೀಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೊಂದು ದೊಡ್ಡ ಶಕ್ತಿ ನಮ್ಮ ಜೊತೆ ಕೈ ಜೋಡಿಸುತ್ತದೆ. 30 ಪಂಚಾಯಿತಿ ಪೈಕಿ, 20 ಪಂಚಾಯಿತಿಗಳನ್ನು ನಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತೇವೆ. ಎಲ್ಲರೂ ಪಾರದರ್ಶಕ ರೀತಿಯಲ್ಲಿ ಕೆಲಸ ಮಾಡುತ್ತೇವೆ ಎಂದರು.
ಅಭ್ಯರ್ಥಿಗಳು ಪ್ರತಿ ಗ್ರಾಮ ಪಂಚಾಯತಿಯಲ್ಲಿರುವ ಸಮಸ್ಯೆಗಳನ್ನು ಪಟ್ಟಿಮಾಡಬೇಕು. ಈ ಆಧಾರವಾಗಿಟ್ಟುಕೊಂಡು ಕ್ರಿಯಾಯೋಜನೆ ರೂಪಿಸಿ ಇನ್ನುಳಿದ ಎರಡೂವರೆ ವರ್ಷಗಳಲ್ಲಿ ಗ್ರಾಮಗಳ ಅಭಿವೃದ್ಧಿ ಕಾರ್ಯವನ್ನು ಮಾಡುತ್ತೇನೆ ಎಂದರು.
ರಾಜ್ಯ ಸರ್ಕಾರ ನಮ್ಮ ಪರವಾಗಿದೆ. ಹೆಚ್ಚಿನ ಅನುದಾನ ತಂದು ನನ್ನ ಬೆಂಬಲಿಗರಾಗಿ ಗೆದ್ದ ಅಭ್ಯರ್ಥಿಗಳ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ. ಅವರೊಂದಿಗೆ ನಾನಿರುತ್ತೇನೆ. ಏನೇ ಸಮಸ್ಯೆ, ತೊಡಕಾದರೂ ನನ್ನ ಅವರು ಕಾಣಬಹುದು ಖುದ್ದು ಸಮಸ್ಯೆ ಬಗೆಹರಿಸುತ್ತೇನೆ ಎಂದು ತಿಳಿಸಿದ್ದಾರೆ.