ಚಾಮರಾಜನಗರ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವದ ದಿನ ನಡೆದ ಗಲಾಟೆಯ ಹಿಂದೆ ಕಾಂಗ್ರೆಸ್ನ ಹೊಟ್ಟೆಕಿಚ್ಚು ಕೆಲಸ ಮಾಡಿದೆ. ಗಲಭೆಗೆ ಕಾರಣ ವಿಪಕ್ಷ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.
ಓದಿ: ನಾವು ಮುಂಬೈ ಕರ್ನಾಟಕದವರು, ಮುಂಬೈ ನಮ್ಮದು: ಮಹಾ ಸಿಎಂಗೆ ಡಿಸಿಎಂ ಸವದಿ ತಿರುಗೇಟು
ಗುರುವಾರ ಚಾಮರಾಜನಗರದಲ್ಲಿ ನಡೆಯುವ ರಾಜ್ಯ ಬಿಜೆಪಿ ಎಸ್ಟಿ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ದೆಹಲಿ ಗಲಭೆ ಸೃಷ್ಟಿಸಿರುವುದು ವಿಪಕ್ಷಗಳು. ಸಾಕಷ್ಟು ಯೋಜನೆ ಹಾಕಿಕೊಂಡು, ಪೂರ್ವ ತಯಾರಿ ನಡೆಸಿ ಕಾಂಗ್ರೆಸ್ ಗಲಭೆ ನಡೆಸಿದೆ. ಪ್ರಧಾನಿ ಮೋದಿ ಅವರ ಉತ್ತಮ ಆಡಳಿತ ಕಂಡು ಹೊಟ್ಟೆಕಿಚ್ಚಿನಿಂದ ರೈತರ ಹೆಸರಿನಲ್ಲಿ ದಾಂಧಲೆ ನಡೆಸಿದೆ ಎಂದು ಕಿಡಿಕಾರಿದರು.
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಹುಚ್ಚಾಗಿ ವರ್ತಿಸುತ್ತಿದ್ದು, ಸಿಎಎ ಹೆಸರಿನಲ್ಲಿ ಬೆಂಕಿ ಹಾಕುವ ಕೆಲಸ ಮಾಡಿತು. ಈಗ ರೈತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದು, ಅಶಾಂತಿ ಸೃಷ್ಟಿಸಿದ್ದು ಯಾರಿಗೂ ಶೋಭೆ ತರಲ್ಲ. ಘಾತುಕ ಶಕ್ತಿಗಳ ಕೈವಾಡದಿಂದ ದೆಹಲಿ ಗಲಾಟೆ ನಡೆದಿದೆ ಎಂದು ದೂರಿದರು.
ಇದೇ ವೇಳೆ, ಬಿ.ಸಿ.ಪಾಟೀಲ್ ಅವರ ರೈತರು ಭಯೋತ್ಪಾದಕರೆಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಸಚಿವರು ರೈತರನ್ನು ಭಯೋತ್ಪಾದಕರು ಎಂದಿಲ್ಲ. ರೈತರ ಹೆಸರಿನಲ್ಲಿ ದಾಂಧಲೆ ಮಾಡಿದವರನ್ನು, ರಾಜಕೀಯ ಮಾಡಿ ಅಶಾಂತಿ ಸೃಷ್ಟಿಸಿದವರನ್ನು ಭಯೋತ್ಪಾದಕರು ಎಂದಿದ್ದಾರೆ.
ನಾನು ಕೂಡ ಗಲಭೆ ಉಂಟು ಮಾಡಿ ರೈತರ ಹೆಸರಿಗೆ ಕಳಂಕ ತರಲು ಯತ್ನಿಸಿದವರನ್ನು, ರೈತರ ಹೆಸರಿನಲ್ಲಿ ಅಕ್ರಮವಾಗಿ ಪ್ರವೇಶಿಸಿ ಗಲಭೆ ಎಬ್ಬಿಸಿದವರನ್ನು ಧಗಾಕೋರರು ಎನ್ನುತ್ತೇನೆ ಎಂದು ಬಿ.ಸಿ.ಪಾಟೀಲ್ ಪರ ಬ್ಯಾಟ್ ಬೀಸಿದರು.