ಕೊಳ್ಳೇಗಾಲ: ಬಿಎಸ್ಪಿ ಉಚ್ಚಾಟಿತ ಶಾಸಕ ಎನ್. ಮಹೇಶ್, ಡಿಜೆ ಮತ್ತು ಕೆಜೆ ಹಳ್ಳಿ ಪ್ರಕರಣ ವಿಚಾರವಾಗಿ ಮಾಧ್ಯಮಗಳಲ್ಲಿ ಮಾತನಾಡುತ್ತ ನಾನು ಸ್ವತಂತ್ರ ಶಾಸಕ ಎಂದು ಹೇಳಿಕೊಂಡಿರುವ ಮಾತನ್ನು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಬಿಎಸ್ಪಿ ಪಕ್ಷ ತೀವ್ರವಾಗಿ ಖಂಡಿಸಿದೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಬಿಎಸ್ಪಿ ಅಧ್ಯಕ್ಷ ರಾಜಶೇಖರ್ ಮೂರ್ತಿ ಮಾತನಾಡಿ, ಬಿಎಸ್ಪಿ ಉಚ್ಚಾಟಿತ ಎನ್. ಮಹೇಶ್ ಹೇಳಿಕೊಂಡಿರುವ, ನಾನು ಸ್ವತಂತ್ರ ಶಾಸಕ ಎಂಬ ಮಾತಿಗೆ ನಮ್ಮ ಪಕ್ಷದಿಂದ ತೀವ್ರ ವಿರೋಧವಿದೆ ಎಂದರು.
ನಮ್ಮ ಪಕ್ಷದಿಂದ ಗೆದ್ದು ನಾನು ಸ್ವತಂತ್ರ ಶಾಸಕ ಎಂದು ಹೇಳಿಕೊಳ್ಳುವುದು ತಪ್ಪು. ಸ್ವತಂತ್ರ ಶಾಸಕ ಎಂದು ಕರೆಸಿಕೊಳ್ಳಬೇಕಾದರೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ, ನಂತರ ಬೇರೆ ಪಕ್ಷದಿಂದ ಅಥವಾ ಸ್ವತಂತ್ರವಾಗಿ ಗೆದ್ದು ಸ್ವತಂತ್ರ ಶಾಸಕನಾಗಲಿ. ಇವರಾಡಿರುವ ಮಾತು ಆನೆ ಪಕ್ಷಕ್ಕೆ ಅವಮಾನ ಮಾಡಿದಂತಿದೆ. ಮುಂದೇನಾದರೂ ಇದೇ ರೀತಿ ಸ್ವತಂತ್ರ ಶಾಸಕ ಎಂಬ ಪದ ಬಳಸಿದ್ದೇ ಆದರೆ ಹೈಕಮಾಂಡ್ ಮುಖಾಂತರ ಹೈಕೋರ್ಟ್ಗೆ ಮೊಕದ್ದಮೆ ಹಾಕಿ ಶಾಸಕ ಸ್ಥಾನವನ್ನು ರದ್ದು ಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಲ್ಲದೆ ಡಿಜೆ ಮತ್ತು ಕೆಜೆ ಹಳ್ಳಿ ಗಲಭೆಗೆ ಸಾಮಾಜಿಕ ಜಾಲತಾಣದ ಗಲಾಟೆಗಳೆ ಕಾರಣ ಎಂದು ತಿಳಿಸಿದ್ದಾರೆ. ಆದರೆ ಗಲಾಟೆಗೆ ಕಾರಣವೇ ಬೇರೆ. ಬಹುಶಃ ಎನ್. ಮಹೇಶ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪದ ನಂಟನ್ನು ಡಿಜೆ ಮತ್ತು ಕೆಜೆ ಹಳ್ಳಿ ಗಲಾಟೆಗೆ ಸಾಮಾಜಿಕ ಜಾಲತಾಣವೇ ಕಾರಣ ಎಂದು ಬಿಂಬಿಸುತ್ತಿದ್ದಾರೆ.
ಈ ಹಿಂದೆ ಚುನಾವಣೆಯಲ್ಲಿ ಶಾಸಕರ ಗೆಲುವಿಗೆ ಸಾಮಾಜಿಕ ಜಾಲತಾಣವೂ ಕಾರಣ. ಆದರೆ ಇದೀಗ ಸಾಮಾಜಿಕ ಜಾಲತಾಣ ಇಂತಹ ಗಲಭೆಗಳಿಗೆ ಕಾರಣ ಎಂದು ಮಾತನಾಡುತ್ತಿದ್ದಾರೆ ಇದು ವಿಪರ್ಯಾಸವೇ ಸರಿ ಎಂದಿದ್ದಾರೆ ರಾಜಶೇಖರ್ ಮೂರ್ತಿ.
ಕ್ಷೇತ್ರ ಅಭಿವೃದ್ಧಿ ಮಾಡಲಿ:
ಕೊಳ್ಳೇಗಾಲ ಸುತ್ತಮುತ್ತಲ ಕೆರೆಗಳ ಅಭಿವೃದ್ಧಿ ಮಾಡುತ್ತೇನೆ ಎಂದು ಶಾಸಕರು ತಿಳಿಸಿದ್ದರು. ಆದರೆ ಈ ಕೆಲಸಗಳು ಶಾಸಕರಾಗಿ 2 ವರ್ಷವಾದರೂ ಇನ್ನೂ ಮಾಡಲಾಗಿಲ್ಲ. ಕ್ಷೇತ್ರ ಅಭಿವೃದ್ಧಿ ಕೆಲಸ ಮಾಡದೆ ಬೇರೆ ವಿಚಾರಗಳ ಬಗ್ಗೆ ಮಾತನಾಡಿ ಪ್ರಚಾರ ಮಾತ್ರ ತೆಗೆದುಕೊಳ್ಳುತ್ತಿದ್ದಾರೆ ಎಂದು ಬಿಎಸ್ಪಿ ಆರೋಪಿಸಿದೆ.