ಗುಂಡ್ಲುಪೇಟೆ (ಚಾಮರಾಜನಗರ) : ಕ್ಷುಲ್ಲಕ ಕಾರಣಕ್ಕೆ ತಂದೆಯೇ ಮಗನನ್ನು ಕೊಂದ ಘಟನೆ ತಾಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಲ್ಲಿಕಾರ್ಜುನಪ್ಪ (48) ಘಟನೆಯಲ್ಲಿ ಮೃತಪಟ್ಟ ವ್ಯಕ್ತಿ. ಗ್ರಾಮದ ಜಮೀನಿನಲ್ಲಿ ಮರ ಕಡಿಯುವ ವಿಚಾರದಲ್ಲಿ ತಂದೆ ಹಾಗೂ ಮಗನ ನಡುವೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ತಂದೆ ಮಹಾದೇವಪ್ಪ ಮಗ ಮಲ್ಲಿಕಾರ್ಜುನಪ್ಪಗೆ ಕೊಡಲಿಯಿಂದ ಹೊಡೆದ ಕಾರಣ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಕೌಟುಂಬಿಕ ಕಲಹ ನಡೆಯುತ್ತಿತ್ತು. ಇದರಿಂದಾಗಿ ಕುಟುಂಬದಿಂದ ಪ್ರತ್ಯೇಕ ವಾಸವಿದ್ದ ಮಲ್ಲಿಕಾರ್ಜುನಪ್ಪ ಕುಟುಂಬದ ಜಮೀನಿನಲ್ಲಿ ಮರ ಕಡಿಯಲು ಮುಂದಾಗಿದ್ದರು. ಈ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದ್ದ ಹಿನ್ನೆಲೆ ಗ್ರಾಮಸ್ಥರು ತೀರ್ಮಾನ ಮಾಡಿ ಕೊಡುವ ಸಲಹೆ ಕೇಳಿದ್ದರು.
ವಿವಾದ ತೀರ್ಮಾನವಾಗುವ ಮೊದಲೇ ಮಲ್ಲಿಕಾರ್ಜುನಪ್ಪ ಇಂದು ಬೆಳಗ್ಗೆ ಮರ ಕಡಿಯಲು ಮುಂದಾಗಿದ್ದರು. ಅಲ್ಲೇ ಇದ್ದ ತಂದೆ ಮಗನನ್ನು ಮರ ಕಡಿಯದಂತೆ ತಡೆಯಲು ಮುಂದಾಗಿದ್ದಾರೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ತಂದೆಯೇ ಮಗನನ್ನು ಹತ್ಯೆ ಮಾಡಿದ್ದಾನೆ.