ಚಾಮರಾಜನಗರ : ಹಿಟ್ಟಿನ ದೊಣ್ಣೆಯಿಂದ ಹೊಡೆದು ಬಾವನನ್ನೇ ಕೊಂದಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜಿಲ್ಲಾ ಅಪರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಹನೂರು ತಾಲೂಕಿನ ಆಲಂಬಾಡಿ ಗ್ರಾಮದ ಸೆಲ್ವಾ ಅಲಿಯಾಸ್ ಸೇಟು ಎಂಬ ಅಪರಾಧಿ ಶಿಕ್ಷೆಗೊಳಗಾದವನು. ಈತ ಕ್ಷುಲ್ಲಕ ಕಾರಣಕ್ಕೆ ಅಕ್ಕ,ಬಾವನನ್ನು ಥಳಿಸಿ ಪರಾರಿಯಾಗಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬಾವ ಮೃತಪಟ್ಟಿದ್ದ.
ಪ್ರಕರಣದ ಹಿನ್ನೆಲೆ : ಆಲಂಬಾಡಿ ಗ್ರಾಮದ ಮೇರಿ ಮೊದಲ ಗಂಡ ಮೃತಪಟ್ಟ ಕಾರಣ ಅದೇ ಗ್ರಾಮದ ಸುರೇಶ್ ಎಂಬಾತನೊಂದಿಗೆ 2ನೇ ಮದುವೆಯಾಗಿದ್ದಳು. 2017ರ ನವೆಂಬರ್ 25 ರಂದು ಮೇರಿ ಹಾಗೂ ಸುರೇಶ್ ಇಬ್ಬರು ಜಗಳವಾಡುತ್ತಿದ್ದಾಗ ಸೆಲ್ವ ಸುರೇಶನಿಗೆ ಹಿಟ್ಟಿನ ದೊಣ್ಣೆಯಿಂದ ಹಿಗ್ಗಾಮುಗ್ಗಾ ಥಳಿಸಿದ್ದ.
ತಡೆಯಲು ಬಂದ ಅಕ್ಕ ಮೇರಿ ಮೇಲೂ ಹಲ್ಲೆ ಮಾಡಿದ್ದ. ತೀವ್ರವಾಗಿ ಗಾಯಗೊಂಡಿದ್ದ ಸುರೇಶ್‌ನನ್ನು ತಮಿಳುನಾಡಿನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ. ಈ ಕುರಿತು ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೆಲ್ವನ ಮೇಲಿದ್ದ ಆರೋಪ ಸಾಬೀತಾದ ಹಿನ್ನೆಲೆ ಜೀವಾವಧಿ ಶಿಕ್ಷೆ, 20 ಸಾವಿರ ರೂ.ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.