ಚಾಮರಾಜನಗರ: ಅಪೌಷ್ಟಿಕತೆ, ಜನನದ ನಂತರ ಕಾಡುವ ರೋಗಗಳಿಂದ ಶಿಶುಗಳು ಮೃತಪಡುವ ಸಂಖ್ಯೆ ಕಳೆದ ವರ್ಷಕ್ಕಿಂತ ಈ ವರ್ಷದ ಅಕ್ಟೋಬರ್ ಅಂತ್ಯದವರೆಗಿನ ಅಂಕಿ-ಅಂಶಗಳ ಪ್ರಕಾರ ಕಡಿಮೆಯಾಗಿದೆ.
2018-2019ನೇ ಸಾಲಿನಲ್ಲಿ 140 ಶಿಶುಗಳು ಮೃತಪಟ್ಟಿದ್ದು, 8 ಮಂದಿ ತಾಯಂದಿರು ಅಸುನೀಗಿದ್ದರು. ಈ ವರ್ಷದ ಅಕ್ಟೋಬರ್ ಅಂತ್ಯಕ್ಕೆ 6 ಮಂದಿ ತಾಯಂದಿರು, 116 ಶಿಶುಗಳು ಮೃತಪಟ್ಟಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆಶಾದಾಯಕ ಪರಿಸ್ಥಿತಿಯ ನಿರೀಕ್ಷೆ ಮೂಡಿಸಿದೆ.
ತಾಯಿ ಮತ್ತು ಶಿಶು ಮರಣದ ಸಂಖ್ಯೆ ಜಿಲ್ಲೆಯಲ್ಲಿ ಹಾವು ಏಣಿ ಆಟದಂತೆ ಆಗಿದ್ದು, 2013-14ರಲ್ಲಿ 160 ಶಿಶು, 8 ತಾಯಿ. 2014-15ರಲ್ಲಿ 133 ಶಿಶು, 8 ತಾಯಿ. 2015-16ರಲ್ಲಿ 109 ಶಿಶು, 7 ತಾಯಿ. 2016-17ರಲ್ಲಿ 90 ಶಿಶು 6 ತಾಯಿ. 2017-18ರಲ್ಲಿ 81 ಶಿಶು, 6 ತಾಯಂದಿರು ಮೃತಪಟ್ಟು ಮರಣದ ಸಂಖ್ಯೆ ಇಳಿಮುಖವಾಗುತ್ತಿದ್ದಂತೆ 2018-19ರಲ್ಲಿ 8 ಮಂದಿ ತಾಯಂದಿರು, 140 ಶಿಶುಗಳು ಮೃತಪಟ್ಟು ಆತಂಕಕಾರಿ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ವರ್ಷ ಶಿಶುಗಳ ಮರಣ ಸಂಖ್ಯೆಯಲ್ಲಿ 116 ಆಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಈ ಕುರಿತು ಡಿಎಚ್ಒ ಡಾ. ಎಂ.ಸಿ.ರವಿ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಕಳೆದ ಬಾರಿಗೆ ಹೋಲಿಸಿದರೆ ಈ ವರ್ಷ ಶಿಶು ಮರಣದ ಸಂಖ್ಯೆ ಕಡಿಮೆಯಾಗಿದ್ದು, ಉತ್ತಮ ಆರೋಗ್ಯ ಸೇವೆಯನ್ನು ಗ್ರಾಮಾಂತರ ಪ್ರದೇಶದಲ್ಲಿ ಒದಗಿಸುತ್ತಿರುವುದರಿಂದ ಈ ಸಂಖ್ಯೆ ಕಡಿಮೆಯಾಗಿದೆ ಎಂದರು.