ಚಾಮರಾಜನಗರ: ಬಿಸಿಯೂಟ ಸೇವನೆ ಮಾಡಿ 70ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಹನೂರು ತಾಲೂಕಿನ ವಡಕೆಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಹನೂರು ತಾಲೂಕಿನ ವಡಕೆಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ 169ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇಂದು ಮಧ್ಯಾಹ್ನ ಶಾಲೆಯಲ್ಲಿ ನೀಡಿದ ಬಿಸಿಯೂಟ ಸೇವನೆ ಮಾಡಿದ 70 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಶಿಕ್ಷಕರು108 ತುರ್ತು ವೈದ್ಯಕೀಯ ಸಿಬ್ಬಂದಿಗೆ ಮಾಹಿತಿ ತಿಳಿಸಿ ವಿದ್ಯಾರ್ಥಿಗಳನ್ನು ರಾಮಾಪುರ ಮತ್ತು ಕೌದಳ್ಳಿ ಆಸ್ಪತ್ರೆಗೆ ರವಾನಿಸಿದ್ದರು.
ಸದ್ಯ ಎಲ್ಲಾ ವಿದ್ಯಾರ್ಥಿಗಳು ಆರೋಗ್ಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹನೂರು ಬಿಇಒ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ. ಶಾಲೆಗೆ ಹಾಜರಾದ 90 ವಿದ್ಯಾರ್ಥಿಗಳ ಪೈಕಿ 70 ಮಕ್ಕಳು ಊಟ ಸೇವಿಸಿದ್ದು, ಇವರಲ್ಲಿ 10 ಮಂದಿ ತೀವ್ರವಾಗಿ ವಾಂತಿ ಮಾಡಿಕೊಂಡಿದ್ದಾರೆ.
ಕಳೆದ 3 ವರ್ಷಗಳ ಹಿಂದೆಯೂ ವಡಕೆಹಳ್ಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಷಪೂರಿತ ಬಿಸಿಯೂಟ ಸೇವನೆ ಮಾಡಿ 50ಕ್ಕೂ ಮಕ್ಕಳು ಅಸ್ವಸ್ಥಗೊಂಡಿದ್ದರು. ಇದೀಗ ಮತ್ತೊಮ್ಮೆ ಶಾಲೆಯಲ್ಲಿ ವಿಷಪೂರಿತ ಬಿಸಿಯೂಟ ಸೇವಿಸಿ ಮಕ್ಕಳು ಅಸ್ವಸ್ಥಗೊಂಡಿರುವುದರಿಂದ ಪೋಷಕರು ಆತಂಕಗೊಂಡಿದ್ದಾರೆ. ಬಿಸಿಯೂಟದ ಸಾಂಬಾರಿನಲ್ಲಿ ಹಲ್ಲಿ ಬಿದ್ದಿದ್ದರಿಂದ ಈ ಘಟನೆ ನಡೆದಿದೆ.