ಚಾಮರಾಜನಗರ: ಬಂಡೀಪುರಕ ಹುಲಿ ಸಂರಕ್ಷಿತ ಪ್ರದೇಶ ಬೆಂಕಿಯ ಕೆನ್ನಾಲಿಗೆಗೆ ನಲುಗಿ ಹೋಗಿದ್ದು, ಒಂದು ವಲಯದಲ್ಲಿ ಬೆಂಕಿ ಆರಿಸಿದರೆ ಮತ್ತೊಂದು ವಲಯದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ.
ಗುರುವಾರ ಕುಂದಕರೆ ವಲಯದ 500 ಎಕರೆ ಅರಣ್ಯ ಸುಟ್ಟ ಬಳಿಕ ಶುಕ್ರವಾರ ಮತ್ತದೇ ವಲಯದ 200ಕ್ಕೂ ಹೆಚ್ಚು ಎಕರೆ ಪ್ರದೇಶ ಬೆಂಕಿಗಾಹುತಿಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ಆರಿಸುತ್ತಿದ್ದಂತೆ ಸಂಜೆ ಹೊತ್ತಿಗೆ ಗೋಪಾಲಸ್ವಾಮಿ ಅರಣ್ಯ ವಲಯದಲ್ಲೂ ಬೆಂಕಿ ಕಾಣಿಸಿಕೊಂಡಿದೆ.
ಕೆಬ್ಬೇಪುರ -ಚೌಡಹಳ್ಳಿ ಭಾಗದಲ್ಲಿ ಕಾಣಿಸಿಕೊಂಡ ಬೆಂಕಿ ನಾಲ್ಕು ಕಿಮೀವರೆಗೆ ಕಾಡನ್ನು ಆವರಿಸಿತ್ತು. ಬೆಂಕಿಯ ಕೆನ್ನಾಲಿಗೆಗೆ ಚೌಡಹಳ್ಳಿ ಗುಡ್ಡ, ಮಗುವಿನಹಳ್ಳಿಯ ಜಾರ್ಕಲ್ಲು ಕ್ವಾರಿ ಗುಡ್ಡ, ಗುಮ್ಮನಗುಡ್ಡ, ಬಾಳೆತಾರ್‍ಕೊರೆ ಗುಡ್ಡ, ಗೌರಿಕಲ್ಲುಬೆಟ್ಟ ಸೇರಿದಂತೆ ಸುಮಾರು 300 ಎಕರೆಗಿಂತ ಹೆಚ್ಚಿನ ಅರಣ್ಯ ಭೂಮಿ ನಾಶವಾಗಿದೆ.
ಒಂದು ಕಡೆ ಬೆಂಕಿ ಆರಿಸಿ ಹಿಂತಿರುಗುವಷ್ಟರಲ್ಲಿ, ಮತ್ತೊಂದು ವಲಯ ಬೆಂಕಿಗಾಹುತಿಯಾಗುತ್ತಿದೆ. ಸಂಜೆವರೆಗೂ ಗಾಳಿಯ ರಭಸ ಹೆಚ್ಚಿದ್ದರಿಂದ ಆರಿಸಲು ಅಸಾಧ್ಯವಾದ ಪರಿಸ್ಥಿತಿ ಎದುರಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಆರ್ಟಿಯಲ್ಲೂ ಬೆಂಕಿ:
ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ಅರಣ್ಯ ವಲಯದಲ್ಲೂ ಬೆಂಕಿ ಕಾಣಿಸಿಕೊಂಡು 30-50 ಎಕರೆಯಷ್ಟು ಕಾಡು ಸುಟ್ಟು ಭಸ್ಮವಾಗಿದೆ.
ಪುಣಜನೂರು ವಲಯದ ನಾಮರೆ ಮತ್ತು ಚಿಕ್ಕಯ್ಯನಗಿರಿ ಪ್ರದೇಶದ 30-50 ಎಕರೆ ಕಾಡು ಸುಟ್ಟು ಭಸ್ಮವಾಗಿದ್ದು, ಪುಣಜನೂರು ಬೇಡಗುಳಿ ಮಾರ್ಗದಲ್ಲಿ ಕಿಡಿಗೇಡಿಗಳು ಬೆಂಕಿ ಹಾಕಿರಬಹುದು ಎಂದು ಇಲಾಖೆಯ ಅಧಿಕಾರಿಗಳು ಶಂಕಿಸಿದ್ದಾರೆ.
ಒಟ್ಟಿನಲ್ಲಿ ಕಿಡಿಗೇಡಿಗಳ ಕೃತ್ಯದಿಂದ ಸಾವಿರಾರು ಎಕರೆ ಕಾಡು ಸುಟ್ಟು ಭಸ್ಮವಾಗುತ್ತಿದೆ. ಕೂಡಲೇ ಅರಣ್ಯ ಇಲಾಖೆ ಕ್ರಮ ಕೈಗೊಳ್ಳದಿದ್ದಲ್ಲಿ ಕಾಡೇ ನಾಶವಾಗಲಿದೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
