ಚಾಮರಾಜನಗರ: ಕೇಂದ್ರ ಸರ್ಕಾರ ಮೊದಲಿನಿಂದಲೂ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹೇಳಿದ್ದಾರೆ.
ಸಂತೇಮರಹಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಸಿಎಂ ಆಗಿ ಉಳಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರಿಗೆ ಇಷ್ಟವಿಲ್ಲ. ಕರ್ನಾಟಕಕ್ಕೆ ನ್ಯಾಯಯುತವಾಗಿ ಬರಬೇಕಾಗಿದ್ದ ಅನುದಾನಗಳು ಬರುತ್ತಿಲ್ಲ. ರಾಜ್ಯದಲ್ಲಿ ಉಂಟಾದ ಪ್ರವಾಹ ಸಂಬಂಧ ಶೇ 5ರಷ್ಟು ಮಾತ್ರ ಪರಿಹಾರ ನೀಡಿದ್ದಾರೆ. ಜಿಎಸ್ಟಿ ಪಾಲಿನಲ್ಲಿ ಶೇ 5ರಷ್ಟು ಮಾತ್ರ ಕೊಟ್ಟಿದ್ದಾರೆ. ವ್ಯಾಕ್ಸಿನ್ ಹಾಗೂ ಆಕ್ಸಿಜನ್ ನೀಡುವಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ಕಿಡಿಕಾರಿದರು.
ಪ್ರಧಾನಿ ಅವರು ಪ್ರವಾಹ ಪರಿಹಾರ ಸಂಬಂಧ ಬೆಂಗಳೂರಿಗೆ ಬಂದರೂ ಸಹ ಪರಿಶೀಲನೆಗೆ ತೆರಳಲಿಲ್ಲ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಸಿಎಂ ಯಡಿಯೂರಪ್ಪ ಅವರು ಪರಿಹಾರಕ್ಕಾಗಿ ಪರಿಪರಿಯಾಗಿ ಬೇಡಿಕೊಂಡರು. ಬಿಎಸ್ವೈ ಅವರ ವಿರುದ್ದ ಮಾತನಾಡಿದ ಯತ್ನಾಳ್ ಆಗಲಿ, ಕೆ.ಎಸ್. ಈಶ್ವರಪ್ಪ ಅಥವಾ ಇನ್ನಿತರೆ ನಾಯಕರ ವಿರುದ್ದ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಇದರಿಂದಲೇ ಗೊತ್ತಾಗಲಿದೆ ಬಿಎಸ್ವೈ ಅವರನ್ನು ಸಿಎಂ ಆಗಿ ಉಳಿಸಿಕೊಳ್ಳಲು ಇಷ್ಟ ಇಲ್ಲ ಎನ್ನುವುದು ಎಂದು ಟೀಕಿಸಿದರು.
ಸತ್ಯ ಹೇಳಬೇಕಿತ್ತು: ಸಂಸದ ಪ್ರತಾಪ್ ಸಿಂಹ ಅವರು ಒಬ್ಬ ಚುನಾಯಿತ ಜನಪ್ರತಿನಿಧಿಯಾಗಿ ಆಕ್ಸಿಜನ್ ದುರಂತ ನಡೆದಾಗಲೇ ದುರಂತಕ್ಕೆ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರೇ ಕಾರಣ ಎಂದು ನೇರವಾಗಿ ಹೇಳಬಹುದಿತ್ತು. ಆದರೆ ದುರಂತ ನಡೆದ ಮರುದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಪರ ವಕಾಲತ್ತು ವಹಿಸಿದ್ದರು ಎಂದರು.
ಶಾಸಕ ಸಾರಾ ಮಹೇಶ್ ಅವರು ಚಾಮರಾಜನಗರಕ್ಕೆ ಆಕ್ಸಿಜನ್ ಕೊಡದ ಪರಿಣಾಮ ಅಲ್ಲಿ ದುರಂತವೇ ನಡೆದುಹೋಯಿತು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಪ್ರಶ್ನಿಸಿದ ವೇಳೆ ಸಂಸದ ಪ್ರತಾಪ್ ಸಿಂಹ ಮಧ್ಯ ಪ್ರವೇಶಮಾಡಿ, ನಮ್ಮ ಪಾಲಿನ ಆಕ್ಸಿಜನ್ ಅನ್ನು ನಾವು ತೆಗೆದುಕೊಂಡಿದ್ದೇವೆ ಎಂದು ಡಿಸಿ ರೋಹಿಣಿ ಸಿಂಧೂರಿ ಪರ ವಕಾಲತ್ತು ವಹಿಸಿದ್ದರು. ಆದರೆ ನಂತರದ ದಿನಗಳಲ್ಲಿ ಸಂಸದ ಮತ್ತು ಡಿಸಿ ಅವರ ನಡುವೆ ಉಂಟಾದ ಭಿನ್ನಾಭಿಪ್ರಾಯಗಳಿಂದ ಸಂಸದ ಪ್ರತಾಪ್ ಸಿಂಹ ಡಿಸಿ ವಿರುದ್ದ ಹೇಳಿಕೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ನ್ಯಾ. ಬಿ.ಎ. ಪಾಟೀಲ್ ವಿಚಾರಣಾ ಆಯೋಗ ಅವಶ್ಯಕತೆ ಇಲ್ಲ: ಆಕ್ಸಿಜನ್ ದುರಂತ ಸಂಬಂಧ ಈಗಾಗಲೇ ನ್ಯಾ. ವೇಣುಗೋಪಾಲ್ ಅವರು ನ್ಯಾಯಾಲಯಕ್ಕೆ ತನಿಖಾ ವರದಿ ನೀಡಿದ್ದು, ಅದರಂತೆ ತಾತ್ಕಾಲಿಕ ಪರಿಹಾರ ನೀಡಲಾಗಿದೆ. ಆದರೆ, ಈ ಮಧ್ಯೆ ಹೊಸದಾಗಿ ಸರ್ಕಾರ ನೇಮಕ ಮಾಡಿರುವ ನ್ಯಾ. ಬಿ.ಎ. ಪಾಟೀಲ್ ವಿಚಾರಣಾ ಆಯೋಗದ ಅವಶ್ಯಕತೆ ಇಲ್ಲ ಎಂದು ಧ್ರುವನಾರಾಯಣ್ ಅಭಿಪ್ರಾಯಪಟ್ಟರು.
ಕೊಳ್ಳೇಗಾಲದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಆಕ್ಸಿಜನ್ ದುರಂತದ ವರದಿಯನ್ನು ಈಗಾಗಲೇ ನ್ಯಾ. ವೇಣುಗೋಪಾಲ್ ತನಿಖೆ ನೀಡಿದೆ. ಅದರಂತೆ ವರದಿಯಲ್ಲಿ ಬೆಳಕಿಗೆ ಬಂದ 36 ಮಂದಿ ಸಾವಿನ ಪೈಕಿ 24 ಮಂದಿಗೆ ತಾತ್ಕಲಿಕ 2 ಲಕ್ಷ ಪರಿಹಾರ ನೀಡಲಾಗಿದೆ. ಹೀಗಿರುವಾಗ ನ್ಯಾ. ಬಿ.ಎ. ಪಾಟೀಲ್ ವಿಚಾರಣಾ ಆಯೋಗದ ಅವಶ್ಯಕತೆ ಇಲ್ಲ. ಸರ್ಕಾರ ಈ ಕೂಡಲೇ ತನಿಖಾ ಆಯೋಗವನ್ನು ವಾಪಸ್ ಪಡೆಯಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದರು.
ಓದಿ: ಸುಧಾರಿಸಿಕೊಳ್ಳಲು ಇದೊಂದು ಬಾರಿ ಅವಕಾಶ ಕೊಡುತ್ತೇವೆ, ಇಲ್ಲವಾದ್ರೆ ಕಠಿಣ ಕ್ರಮ: ಬೀಮ್ಸ್ಗೆ ಎಚ್ಚರಿಕೆ