ಚಾಮರಾಜನಗರ: ಧರ್ಮ, ಜಾತಿ, ವಯಸ್ಸು, ಸಂಬಂಧ ಮೀರಿದ ಬಂಧ ಒಂದಿದ್ದರೇ ಅದು ಗೆಳೆತನ ಮಾತ್ರ. ಇದಕ್ಕೆ ನಿದರ್ಶನ ಎಂಬಂತೆ ಅಪರೂಪ ಹಾಗೂ ಮಾದರಿ ಮದುವೆಯೊಂದು ನಡೆದಿದ್ದು, ಸ್ನೇಹಿತನ ಮಡದಿಗೆ ಗೆಳೆಯ ಬಾಳು ಕೊಟ್ಟ ಘಟನೆ ನಡೆದಿದೆ.
![A model wedding in Chamarajanagar](https://etvbharatimages.akamaized.net/etvbharat/prod-images/14393832_ssccs.jpg)
ಚಾಮರಾಜನಗರ ತಾಲೂಕಿನ ನಂಜದೇವನಪುರ ಗ್ರಾಮದ ಲೋಕೇಶ್ ಎಂಬುವರು ಗೆಳೆಯನ ಪತ್ನಿಯನ್ನು ಮದುವೆಯಾಗುವ ಮೂಲಕ ಪತಿ ಕಳೆದುಕೊಂಡು ಕಂಗಾಲಾಗಿದ್ದಾಕೆಯ ಬಾಳಿಗೆ ಬೆಳಕಾಗಿದ್ದಾರೆ. ಜ. 27ರಂದು ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಸರ್ಪಭೂಷಣ ಶಿವಯೋಗಿಗಳ ಮಠದ ಆವರಣದಲ್ಲಿ ಈ ಆದರ್ಶ ಮದುವೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಏನಿದು ಕಲ್ಯಾಣ-ಏನಿದು ಗೆಳೆತನ: ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದ ಚೇತನ್‌ಕುಮಾರ್ (41) ಮತ್ತು ಹನೂರು ಪಟ್ಟಣದ ಅಂಬಿಕಾ (30) 8 ವರ್ಷಗಳ ಹಿಂದೆ ವಿವಾಹವಾಗಿದ್ದರು. ಚೇತನ್‌ಕುಮಾರ್ ಅವರು ಬೆಂಗಳೂರಿನ ಖಾಸಗಿ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದರು. ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಚೇತನ್‌ಕುಮಾರ್ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರು.
ಇದನ್ನೂ ಓದಿ: ದೆಹಲಿಗೆ ತೆರಳಿದ ಸಿಎಂ: ಆಕಾಂಕ್ಷಿಗಳಲ್ಲಿ ಗರಿಗೆದರಿದ ಕುತೂಹಲ
ಪತಿಯ ಸಾವಿನಿಂದ ಕಂಗೆಟ್ಟ ಅಂಬಿಕಾ, ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಚೇತನ್‌ಕುಮಾರ್ ಗೆಳೆಯ, ಎಂ.ಲೋಕೇಶ್ ಅವರು ಅಂಬಿಕಾಗೆ ಸಾಂತ್ವನ ಹೇಳಿ, ತನ್ನ ಗೆಳೆಯನ ಕುಟುಂಬಕ್ಕೆ ಆಸರೆಯಾಗಿ ನಿಲ್ಲಲು ನಿರ್ಧರಿಸಿದರು.
![A model wedding in Chamarajanagar](https://etvbharatimages.akamaized.net/etvbharat/prod-images/14393832_sss.jpg)
ತನ್ನ ಗೆಳೆಯನ ಪತ್ನಿಯನ್ನು ಮದುವೆಯಾಗಲು ನಿರ್ಧರಿಸಿ, ಅಂಬಿಕಾ ತಂದೆ, ತಾಯಿಯ ಬಳಿ ಹಾಗೂ ಚೇತನ್‌ಕುಮಾರನ ತಂದೆ, ತಾಯಿಯ ಹತ್ತಿರ ಈ ವಿಷಯವನ್ನು ಪ್ರಸ್ತಾಪಿಸಿದರು. ಅವರೆಲ್ಲರ ಮನವೊಲಿಕೆ ಮಾಡಿದ ನಂತರ ಅಂಬಿಕಾ ಮದುವೆಗೆ ಒಪ್ಪಿದ್ದಾರೆ. ಲೋಕೇಶ್ ಅವರು ಅಂಬಿಕಾ ಅವರನ್ನು ಪುನರ್ ವಿವಾಹವಾಗುವ ಮೂಲಕ ಮಾದರಿಯಾಗಿ ಗೆಳೆಯನ ಕುಟುಂಬಕ್ಕೆ ಆಸರೆಯಾಗಿದ್ದಾರೆ.