ಕೊಳ್ಳೇಗಾಲ: ಕೆರೆಕಟ್ಟೆ, ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರೈತರು ಧರಣಿ ನಡೆಸುತ್ತಿದ್ದು, ಈ ವೇಳೆ ಸಮಸ್ಯೆ ಆಲಿಸಲು ಸ್ಥಳಕ್ಕಾಗಮಿಸಿದ ಶಾಸಕರು ಪ್ರತಿಭಟನೆಯಲ್ಲಿ ಕೈ ಜೋಡಿಸಿರುವ ಘಟನೆ ನಡೆದಿದೆ. ಪಟ್ಟಣದ ನೀರಾವರಿ ಇಲಾಖೆಯಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ ಶಾಸಕ ಎನ್.ಮಹೇಶ್ ಹಾಗೂ ಆರ್.ನರೇಂದ್ರ, ಅವರಿಗೆ ಬೆಂಬಲ ಸೂಚಿಸಿ, ಕಬಿನಿಯಿಂದ ನೀರು ಬೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಾಡಿಕೆಯಂತೆ ಈ ವರ್ಷ ಮಳೆ ಬಂದಿಲ್ಲ. ನೀರಿಲ್ಲದೇ ಕಾಲುವೆ, ಕೆರೆ - ಕಟ್ಟೆಗಳು ಬತ್ತಿ ಹೋಗಿವೆ. ಅಂತರ್ಜಲವೂ ಕುಸಿದಿದ್ದು, ಜಾನುವಾರುಗಳಿಗೆ ನೀರಿಲ್ಲ. ಈ ಹಿನ್ನೆಲೆ ಕೂಡಲೇ ಕಬಿನಿ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ಬೆಳಗ್ಗೆ 11 ಗಂಟೆಯಿಂದ ರೈತರು ಪ್ರತಿಭಟನೆ ನಡೆಸಿದರು. ಈ ವೇಳೆ, ರೈತ ಮುಖಂಡ ಗೌಡೇಗೌಡ ಮಾತನಾಡಿ, ಕಬಿನಿ ಒಳಹರಿವು ಹೆಚ್ಚಾದ ಹಿನ್ನಲೆಯಲ್ಲಿ ನದಿಗೆ 6 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದೀರಿ, ಕೇಳಿದರೆ ಕುಡಿಯಲು ನೀರು ಬಿಟ್ಟಿದ್ದೀವಿ ಎನ್ನುತ್ತೀರಾ.
ಅದರಲ್ಲಿ ನಮ್ಮ ಭಾಗದ ರೈತರು, ಜಾನುವಾರುಗಳು ನೀರಿಲ್ಲದೆ ಕಂಗಾಲಾಗಿದ್ದಾರೆ. ನದಿಗೆ ನೀರು ಬಿಡಲು ನಿಮಗೆ ನೀರಿದೆ ನಾಲೆಗೆ ಮಾತ್ರ ನೀರು ಇಲ್ಲವೇ. 2 ಸಾವಿರ ಕ್ಯೂಸೆಕ್ ನೀರು ಬಿಟ್ಟರೆ ನಮಗೆ ಸಾಕಾಗಿತ್ತು. ಇದೀಗ ತಕ್ಷಣವೇ ನೀರು ಬಿಡಿ ಎಂದು ರೈತರು ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡರು.
ಕಬಿನಿ ಇಇ ಪ್ರಭು ಪ್ರತಿಕ್ತಿಯಿಸಿ, ಜು.5 ರಂದು ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಸಭೆ ನಡೆಸಿ ಬಿಡಲಾಗುತ್ತದೆ ಎನ್ನುತ್ತಿದ್ದಂತೆ ಕುಪಿತಗೊಂಡ ರೈತರು ಸಚಿವರೇನೂ ದೇವಮಾನವರಲ್ಲ. ನದಿಗೆ ನೀರು ಬಿಡಲು ಯಾರ ಅಪ್ಪಣೆಯೂ ತೆಗೆದುಕೊಂಡಿಲ್ಲ. ಸಭೆಯನ್ನೂ ಮಾಡಿಲ್ಲ. ರೈತರಿಗೆ ಬಿಡಲು ಸಭೆ ಮಾಡಬೇಕಾ ಎಂದು ಜನಪ್ರತಿನಿಧಿಗಳ ಮೇಲೆ ಆಕ್ರೋಶದ ಘೋಷಣೆ ಕೂಗಿದರು.
ನೀರು ಬಿಡ್ತಿರೋ ಇಲ್ವೋ
ನೀರು ಬಿಡಲು ಸಾಧ್ಯವಾಗದಿದ್ದರೆ ನಮ್ಮ ಜೊತೆ ಕುಳಿತುಕೊಳ್ಳಿ ಎಂದು ಕಬಿನಿ ಇಇ ವೆಂಕಟೇಶ್ ಪ್ರಭು, ಎಇಇ ಶಾಂತ ಕುಮಾರ್, ಮಹದೇವಸ್ವಾಮಿಯವರನ್ನು ದಿಗ್ಬಂಧನ ಹಾಕಿದ ರೈತರು ಶಾಸಕರು ಹಾಗೂ ಮೇಲಾಧಿಕಾರಿ ಬರುವವರೆಗೂ ನಮ್ಮದೊಂದಿಗೆ ಕುಳಿತುಕೊಳ್ಳಿ ಎಂದು ಪಟ್ಟು ಹಿಡಿದರು. ಈ ಬಳಿಕ ರೈತರ ಆಗ್ರಹದಂತೆ ಮಧ್ಯಾಹ್ನ 3 ಗಂಟೆಗೆ ಶಾಸಕ ಎನ್. ಮಹೇಶ್ ಹಾಗೂ ಹನೂರು ಶಾಸಕ ನರೇಂದ್ರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರ ಮನವೊಲಿಸಲು ಮುಂದಾದರು.
ಮೈಸೂರು ಹಾಗೂ ಚಾಮರಾಜನಗರ ಉಸ್ತುವಾರಿ ಸಚಿವರು ಸೇರಿದಂತೆ ನೀರಾವರಿ ಇಲಾಖೆಯ ಮೇಲಿನ ಅಧಿಕಾರಿಗಳೊಂದಿಗೆ ಮಾತನಾಡಿ ಬೇಡಿಕೆ ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು. ಆದರೆ, ಸಕಾರಾತ್ಮಕ ಪ್ರತಿಕ್ರಿಯೆ ದೊರಕದ ಹಿನ್ನೆಲೆಯಲ್ಲಿ ಶಾಸಕರು ಪ್ರತಿಭಟನೆ ಸ್ಥಳದಲ್ಲಿ ಕೂತು ರೈತರಿಗೆ ಬೆಂಬಲಿಸಿದರು.
4 ಗಂಟೆಯದರೂ ಶಾಸಕರಿಗೆ ಸಿಗದ ಉತ್ತರ: ನೀರು ಬಿಡುವ ವಿಚಾರಕ್ಕೆ ಇಬ್ಬರು ಶಾಸಕರು ಸಚಿವರು, ಅಧಿಕಾರಿಗಳಿಗೆ ಮೇಲಿಂದ ಮೇಲೆ ಕರೆ ಮಾಡಿ ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗದೇ ಸುಮಾರು 4 ಗಂಟೆಯ ಕಾಲ ಪ್ರತಿಭಟನಾಕಾರರ ಜೊತೆ ಕುಳಿತರು. ಬಳಿಕ ಸುದ್ದಿಗಾರದೊಂದಿಗೆ ಮಾತನಾಡಿದ ಶಾಸಕ ಎನ್.ಮಹೇಶ್, ಕಬಿನಿ ನಾಲೆಗಳಿಗೆ ನೀರು ಬಿಡುವ ರೈತರ ಬೇಡಿಕೆಗೆ ಪೂರಕವಾಗಿ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ. ಆದರೆ, ಸೂಕ್ತ ಪ್ರತಿಕ್ರಿಯೆ ದೊರಕಿಲ್ಲ. ಆದ್ದರಿಂದ ಚಳುವಳಿಗೆ ನಾವು ಬೆಂಬಲ ಸೂಚಿಸಿದ್ದೇವೆ ಎಂದರು.