ಚಾಮರಾಜನಗರ: ಯಾವ ಊರಲ್ಲೂ ನಾನು ಅಭಿವೃದ್ಧಿ ಮಾಡಿಲ್ಲ, ಯೋಜನೆಗಳ ಕಾಮಗಾರಿ ನಡೆಸಿಲ್ಲ ಎಂದು ಜನರು ಹೇಳಿದ್ರೆ ಅಂದೇ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಹನೂರು ಶಾಸಕ ಆರ್ ನರೇಂದ್ರ ಸವಾಲೆಸೆದಿದ್ದಾರೆ.
ಹನೂರು ತಾಲೂಕಿನ ಶೆಟ್ಟಹಳ್ಳಿ ಗ್ರಾಮದಲ್ಲಿ ದೇಗುಲವೊಂದರ ಭೂಮಿ ಪೂಜೆಯನ್ನ ಅವರು ಸೋಮವಾರ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, 478 ಹಳ್ಳಿಗಳ ಪೈಕಿ ಯಾವುದಾದರೂ ಒಂದು ಗ್ರಾಮದಲ್ಲಿ ಶಾಸಕರು ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ರೆ, ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲೆಸೆದಿದ್ದಾರೆ.
ಕ್ಷೇತ್ರ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸ ಮುಖಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಪ್ರಚಾರ ನಡೆಸುತ್ತಿದ್ದಾರೆ. ಇವರಿಗೆ ಶಾಸಕರು ಕ್ಷೇತ್ರದ ವಿಸ್ತೀರ್ಣವೆಷ್ಟು, ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು ಹಳ್ಳಿಗಳಿವೆ? ಎಂದು ಹೇಳಲಿ ಎಂದು ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: ವಿವಾದ ಮಾಡುವುದರಲ್ಲಿ ಬಿಜೆಪಿಗರು ನಿಸ್ಸೀಮರು.. ಮಾಂಸ ವಿವಾದಕ್ಕೆ ಆರ್ ಧ್ರುವನಾರಾಯಣ ಕಿಡಿ
ಪ್ರತಿಯೊಬ್ಬ ಮತದಾರರು ಹಣಕ್ಕಾಗಿ ತಮ್ಮ ಮತ ಚಲಾಯಿಸಬಾರದು. ಅವರು ನೀಡಿರುವ ಹಣ ಕೇವಲ 1 ದಿನಕ್ಕಷ್ಟೇ ಸೀಮಿತ. ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವುದು ಎರಡನೇ ವಿಚಾರ. ಆದರೆ ಕ್ಷೇತ್ರದಲ್ಲಿರುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು 5 ವರ್ಷ ಬೇಕು. ನಮ್ಮದು ವಿಶೇಷವಾದ ಕ್ಷೇತ್ರ, ಪ್ರತಿದಿನ ಜನರ ಮಧ್ಯೆ ನಿಂತು ಕೆಲಸ ಮಾಡುವ ಜನಪ್ರತಿನಿಧಿಗಳಿಗೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವಿರುತ್ತದೆ ಎಂದು ಚುನಾವಣೆಗೆ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿರುವ ವ್ಯಕ್ತಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.