ಚಾಮರಾಜನಗರ: ಬಾಕಿ ವೇತನ ಕೇಳಲು ಹೋದ ವೇಳೆ ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಿದ್ದಾರೆ ಎಂಬ ಆರೋಪ ಹೊತ್ತಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ. ಸಂಜೀವ್ ವಿರುದ್ಧ ಶಾಸಕ ಪುಟ್ಟರಂಗಶೆಟ್ಟಿ ಸಿಎಂಗೆ ಪತ್ರ ಬರೆದಿದ್ದಾರೆ. ರಾಷ್ಟ್ರ ನಾಯಕರನ್ನು ಅವಹೇಳನ ಮಾಡಿ ಜನರ ಮನಸ್ಸಿಗೆ ನೋವುಂಟು ಮಾಡಿದ್ದಾರೆ.
ಈಗಾಗಲೇ ಸಂಜೀವ್ ವಿರುದ್ಧ ಸಾಕಷ್ಟು ಭ್ರಷ್ಟಾಚಾರ ಆರೋಪವೂ ಕೇಳಿಬಂದಿದ್ದು, ಸರ್ಕಾರಕ್ಕೆ ಮುಜುಗುರ ಉಂಟಾಗುವ ಸನ್ನಿವೇಶ ಸೃಷ್ಟಿಸಿದ್ದು ಕೂಡಲೇ ಅವರನ್ನು ಸಿಮ್ಸ್ ಡೀನ್ ಹುದ್ದೆಯಿಂದ ಬಿಡುಗಡೆ ಮಾಡಬೇಕೆಂದು ಸಿ. ಪುಟ್ಟರಂಗಶೆಟ್ಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಶಾಸಕರು ಪತ್ರ ಬರೆಯುತ್ತಿದ್ದಂತೆ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಸೂಕ್ತ ತನಿಖೆಗೆ ದ್ವಿಸದಸ್ಯ ತಂಡ ರಚಿಸಿ ಕೂಡಲೇ ವರದಿ ಕೊಡುವಂತೆ ಸೂಚನೆ ನೀಡಿದ್ದಾರೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ. ಕೆ. ರವಿ ಹಾಗೂ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಆಡಳಿತಾಧಿಕಾರಿ ಕೆ. ಎ. ಉಮಾ ಅವರನ್ನೊಳಗೊಂಡ ಸಮಿತಿ ರಚನೆ ಮಾಡಲಾಗಿದೆ. ಕೂಡಲೇ ಚಾಮರಾಜನಗರ ಮೆಡಿಕಲ್ ಕಾಲೇಜಿಗೆ ಚಾಮರಾಜನಗರ ಡಿಸಿ ಹಾಗೂ ಎಸ್ಪಿ ಅವರೊಟ್ಟಿಗೆ ತೆರಳಿ ಪ್ರಕರಣದ ಪರಿಶೀಲನೆ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ನವೀನ್ ರಾಜ್ ಆದೇಶಿಸಿದ್ದಾರೆ.
ಇತ್ತೀಚೆಗೆ ಮಸಿ ಬಳಿದು ಕಾರು ಜಖಂ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದ ಪ್ರತಿಭಟನಾಕಾರರು: ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ನಿಂದಿಸಿದ್ದಾರೆಂದು ಮೆಡಿಕಲ್ ಕಾಲೇಜಿನ ವೈದ್ಯ ಮಾರುತಿ ದೂರು ಕೊಡುತ್ತಿದ್ದಂತೆ ಆಕ್ರೋಶಗೊಂಡ ಗುತ್ತಿಗೆ ನೌಕರರು ಹಾಗೂ ದಲಿತ ಪರ ಸಂಘಟನೆಗಳು ಡೀನ್ ಡಾ. ಸಂಜೀವ್ ಮುಖಕ್ಕೆ ಮಸಿ ಬಳಿದು, ಕಾರನ್ನು ಜಖಂ ಮಾಡಿ ಕಳೆದ ವಾರ ಆಕ್ರೋಶ ಹೊರಹಾಕಿದ್ದರು. ವಿಚಾರ ಅರಿತ ಪೊಲೀಸರು ದೌಡಾಯಿಸಿ ಡೀನ್ ಅವರನ್ನು ಪ್ರತಿಭಟನಾಕಾರರಿಂದ ರಕ್ಷಿಸಿ ಪೊಲೀಸ್ ಠಾಣೆಗೆ ಕರೆತಂದು ರಕ್ಷಿಸಿದ್ದರು. ಡೀನ್ ವಿರುದ್ಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಾಮೀನನ್ನು ಮಂಜೂರು ಮಾಡಲಾಗಿತ್ತು.
ಆರೋಪ ಏನು..?: ಹಲವು ತಿಂಗಳುಗಳಿಂದ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರಿಗೆ ವೇತನ ಆಗಿಲ್ಲ. ಇದನ್ನು ಕೇಳಲು, ಡೀನ್ ಕೊಠಡಿಗೆ ತೆರಳಿದ್ದ ವೇಳೆ ಅಂಬೇಡ್ಕರ್ ಹಾಗೂ ಸಂವಿಧಾನ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಅ. ಪುತ್ಥಳಿಗೆ ಕಿಡಿಗೇಡಿಗಳಿಂದ ಹಾನಿ, ದಲಿತ ಸಂಘಟನೆಗಳಿಂದ ಆಕ್ರೋಶ (ಬೆಂಗಳೂರು ಗ್ರಾ): ಹೊಸಕೋಟೆ ತಾಲೂಕಿನ ಯನಗುಂಟೆ ಗ್ರಾಮದಲ್ಲಿ ಮೇ 14 ರ ತಡರಾತ್ರಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಕಿಡಿಗೇಡಿಗಳು ಹಾನಿ ಮಾಡಿರುವ ಘಟನೆ ನಡೆದಿತ್ತು. ಇದರಿಂದ ಕೋಪಗೊಂಡಿದ್ದ ಗ್ರಾಮಸ್ಥರು ಹಾಗೂ ಸಂಘಟನೆಗಳ ಪ್ರಮುಖರು ಕಿಡಿಗೇಡಿಗಳ ಕೃತ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಈ ಕುರಿತು ಸ್ಥಳಕ್ಕೆ ಸೂಲಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರನ್ನು ಸಮಾಧಾನಗೊಳಿಸಿ, ಆರೋಪಿಗಳಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದರು.
ಪ್ರತಿದೂರು ನೀಡಿದ್ದ ಡೀನ್: ತಮ್ಮ ವಿರುದ್ಧ ಪ್ರತಿಭಟನೆ ಹಾಗೂ ದೂರು ದಾಖಲಾದ ಬಳಿಕ ಡೀನ್ ಡಾ.ಸಂಜೀವ್ ಅವರು ಕೂಡ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ.ಮಾರುತಿ ಹಾಗೂ 70ಕ್ಕೂ ಹೆಚ್ಚು ಪ್ರತಿಭಟನಾಕಾರರ ವಿರುದ್ಧ ದೂರು ಕೊಟ್ಟಿದ್ದರು. ತಮ್ಮ ವಿರುದ್ಧ ಮಾರುತಿ ಸುಳ್ಳು ಆರೋಪ ಮಾಡಿದ್ದು, ಪ್ರಾಣ ಬೆದರಿಕೆವೊಡ್ಡಿದ್ದಾರೆ ಎಂದು ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ: ಕಲಬುರಗಿಯ ಮಿಡ್‌ನೈಟ್ ಮರ್ಡರ್ ಕೇಸ್: ಆರೋಪಿ ತಂದೆ, ಮಕ್ಕಳು ಸೆರೆ