ಚಾಮರಾಜನಗರ : ಉಪ ಚುನಾವಣೆ ನಡೆದಿದ್ದರೇ ಬಿಜೆಪಿ ಸರ್ಕಾರ ಬೀಳುತ್ತಿತ್ತು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉಪಚುನಾವಣೆ ನಡೆದಿದ್ದರೆ ಬಿಜೆಪಿ 6-7 ಸ್ಥಾನ ಗೆಲ್ಲಲ್ಲೇಬೇಕಿತ್ತು. ಆದರೆ, ಅವರಿಗೆ ಗೆಲ್ಲುವ ಅವಕಾಶ ಇರಲಿಲ್ಲ. ಇದಕ್ಕಾಗಿಯೇ ಕೇಂದ್ರ ಸರ್ಕಾರ ಹುನ್ನಾರ ನಡೆಸಿ ಚುನಾವಣೆ ಮುಂದೂಡಿದೆ ಎಂದು ಆರೋಪಿಸಿದರು. ಈ ಉಪಚುನಾವಣೆಯೇ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದೆ. ಈ ಸರ್ಕಾರಕ್ಕೆ ಬಹುಮತವಿಲ್ಲದೇ ನೀರಿನ ಮೇಲೆ ಗುಳ್ಳೆಯಂತಿದೆ ಎಂದು ಲೇವಡಿ ಮಾಡಿದರು.
ಇದೇ ವೇಳೆ, ಕಾಂಗ್ರೆಸ್ ನಾಯಕರ ಕಚ್ಚಾಟಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ, ಮುನಿಯಪ್ಪ ಇಬ್ಬರು ಪ್ರಬಲ ನಾಯಕರು. ಈ ಕುರಿತು ನಾನು ಏನು ಮಾತನಾಡುವುದಿಲ್ಲ. ಹೈಕಮಾಂಡ್ ಎಲ್ಲವನ್ನ ಸರಿಪಡಿಸುತ್ತದೆ. ಎಲ್ಲ ಪಕ್ಷಗಳಲ್ಲೂ ಭಿನ್ನಮತ ಸಹಜ ಎಂದರು.
ಇದೆ ಸಂದರ್ಭದಲ್ಲಿ ಮೈಸೂರು ದಸರಾ ಉತ್ಸವದ ಕುರಿತು ಮಾತನಾಡಿ, ಶಿಷ್ಟಾಚಾರದಂತೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು ದಸರಾ ಸಮಿತಿ ಉಪಾಧ್ಯಕ್ಷರಾಗಬೇಕು. ಆದರೆ, ಸೋಮಣ್ಣ, ಸಿ. ಎಸ್. ನಿರಂಜನಕುಮಾರ್ ಅವರನ್ನು ಮಾಡಿದ್ದಾರೆ. ಅವರ ಮನಸ್ಸಿಗೆ ಬಂದಂತೆ ಮಾಡುವುದಾರೇ ಶಿಷ್ಟಾಚಾರ ಅನ್ನುವುದು ಇಲ್ಲವೇ ಎಂದು ಪ್ರಶ್ನಿಸಿದರು.
ದಸರಾವನ್ನು ಚೆನ್ನಾಗಿ ಮಾಡುವುದರಿಂದ ಏನೂ ಪ್ರಯೋಜನವಿಲ್ಲ, ಸಿದ್ದರಾಮಯ್ಯ ಸರ್ಕಾರದಂತೆ ಜಿಲ್ಲೆಗೆ ಸಾವಿರಾರು ಕೋಟಿ ರೂ. ಅನುದಾನ ತನ್ನಿ. ಪ್ರವಾಹದ ಸಂದರ್ಭದಲ್ಲಿ ಅದ್ಧೂರಿ ದಸರಾ ಬೇಡವಾಗಿತ್ತು, ಸರಳ ದಸರಾ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.