ಚಾಮರಾಜನಗರ : ಜಿಲ್ಲಾ ಉಸ್ತುವಾರಿ ಸಚಿವ ಸಿ ಪುಟ್ಟರಂಗಶೆಟ್ಟಿ ಅವರೇ ನೀರು ತುಂಬಿಸಿದ್ದು ಎಂದು ಹೇಳುತ್ತೇವೆ. ಮೊದಲು ವಡ್ಡಗೆರೆ ಕೆರೆಗೆ ನೀರು ಬಿಡಲಿ ಎಂದು ಶಾಸಕ ನಿರಂಜನಕುಮಾರ್ ಒತ್ತಾಯಿಸಿದರು.
ಗುಂಡ್ಲುಪೇಟೆಯ ಮುಕ್ಕಡಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ವಡ್ಡಗೆರೆ ಕೆರೆಗೆ ಕಾಲುವೆ ಮೂಲಕ ನೀರು ಹರಿಸಬೇಕೆಂದು ಸರ್ಕಾರಕ್ಕೆ ಎರಡು ಬಾರಿ ಮನವಿ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಅವರಿಗೂ ಮನವಿ ಮಾಡಲಾಗಿದೆ. ಕಾಲುವೆ ಮೂಲಕವೇ ನೀರು ಹರಿಸಬಹುದಾಗಿದ್ದು, ಆದಷ್ಟು ಬೇಗನೆ ನೀರು ಹರಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಈಗ ವಡ್ಡಗೆರೆ ಕೆರೆ ನೀರು ಬಿಡಿ ಪೈಪ್ ಲೈನ್ ಅಳವಡಿಸಲೇಬೇಕು ಎಂದರೆ ಮುಂದಿನ ದಿನಗಳಲ್ಲಿ ಪೈಪ್‌ಲೈನ್ ಅಳವಡಿಸಿ, ಸಚಿವರೇ ಇದರ ಕ್ರೆಡಿಟ್ ತೆಗೆದುಕೊಳ್ಳಲಿ. ಇದರಲ್ಲಿ ರಾಜಕೀಯ ಮಾಡುತ್ತಿಲ್ಲ ಎಂದರು.
ಇದೇ ವೇಳೆ, ದಲಿತ ವ್ಯಕ್ತಿಗೆ ಬೆತ್ತಲೆಗೊಳಿಸಿ ಥಳಿಸಿದ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಆರೋಪಿಗಳನ್ನೆಲ್ಲಾ ಬಂಧಿಸಲಾಗಿದೆ. ನಾನು ಈಗಾಗಲೇ ಸುದ್ದಿಗೋಷ್ಠಿ ನಡೆಸಿದ್ದೇನೆ. ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ಶಾಸಕನ ಜವಾಬ್ದಾರಿ ಅರಿತು ಸಮಾಜದ ಸ್ವಾಸ್ಥ್ಯ ಕಾಪಾಡುವ ದಿಸೆಯಲ್ಲಿ ನಡೆದುಕೊಂಡಿದ್ದೇನೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರು ಪ್ರಕರಣ ಸಂಬಂಧ ಏನು ಮಾತನಾಡಿಲ್ಲ ಎಂದು ತಿರುಚುವ ಸುಳ್ಳು ಹೇಳಿಕೆಗಳು ನಿಲ್ಲಲ್ಲಿ ಎಂದರು.
ಬಳಿಕ ಉತ್ತೂರು ಕೆರೆ ಅಂಗಳದಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ತೆರಳಿ ನೀರು ಬಿಡಿಸುವ ಪ್ರಯತ್ನ ಮಾಡುತ್ತೇನೆ. ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡಿದರೂ ರೈತರು ಮಾತ್ರ ಜಗ್ಗಲಿಲ್ಲ.