ಚಾಮರಾಜನಗರ: ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎನ್ ಮಹೇಶ್ ಅವರಿಗೆ ಶನಿವಾರ ದಿಢೀರ್ ಎದೆನೋವು ಕಾಣಿಸಿಕೊಂಡಿದ್ದ ಹಿನ್ನೆಲೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಆ್ಯಂಜಿಯೋಗ್ರಾಂ ಮಾಡಿದ ಬಳಿಕ ಗಾಬರಿಯಾಗುವ ಸಮಸ್ಯೆ ಇಲ್ಲ ಎಂದು ಸ್ವತಃ ಶಾಸಕರು ಹಾಗೂ ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ.
ನಿನ್ನೆ ನಿಧನರಾಗಿದ್ದ ದೃವನಾರಾಯಣ್ ಅವರ ಅಂತಿಮ ದರ್ಶನವನ್ನು ಮೈಸೂರಿನ ವಿಜಯನಗರದ ದೃವನಾರಾಯಣ್ ನಿವಾಸದಲ್ಲಿ ಪಡೆದು ತಮ್ಮ ಸ್ವಕ್ಷೇತ್ರ ಕೊಳ್ಳೆಗಾಲದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಸ್ಥಳೀಯ ಕೊಳ್ಳೆಗಾಲ ಆಸ್ಪತ್ರೆಗೆ ತಪಾಸಣೆಗೆ ಕರೆದುಕೊಂಡು ಹೋಗಲಾಯಿತು.
ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಯಾವುದೇ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಶಾಸಕರಿಗೆ ಹೇಳಿ ಅವರನ್ನು ನಿನ್ನೆಯೇ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ಕಳುಹಿಸಿದ್ದರು. ಎನ್.ಮಹೇಶ್ ಅವರಿಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದ್ದ ಘಟನೆ ಕೊಳ್ಳೇಗಾಲ ಕ್ಷೇತ್ರದ ಅಭಿಮಾನಿಗಳಲ್ಲಿ ಆತಂಕ ಉಂಟು ಮಾಡಿತ್ತು.
ಇಸಿಜಿ, ಆ್ಯಂಜಿಯೋಗ್ರಾಂ ಚಿಕಿತ್ಸೆ: ಅಲ್ಲಿ ಅವರಿಗೆ ಇಸಿಜಿ ಸೇರಿದಂತೆ ಎಲ್ಲಾ ಪರೀಕ್ಷೆಗಳನ್ನು ಮಾಡಲಾಗಿದೆ. ಹೃದಯ ಭಾಗದಲ್ಲಿ ಸ್ವಲ್ಪ ಬ್ಲಾಕ್ ಆಗಿರುವುದು ಗೊತ್ತಾಗಿದ್ದು, ಶನಿವಾರ ಸಂಜೆಯೇ ಅವರಿಗೆ ಆ್ಯಂಜಿಯೋಗ್ರಾಂ ಮಾಡಲಾಗಿದೆ. ಈಗ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಸೋಮವಾರ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷ ಡಾ ಭರತ್ ರೆಡ್ಡಿ ಅವರು ಈಟಿವಿ ಭಾರತ್ ಗೆ ಮಾಹಿತಿ ನೀಡಿದರು.
ಗಾಬರಿಯಾಗಬೇಡಿ, ಜನರಿಗೆ ಶಾಸಕ ಮನವಿ: ಸ್ನೇಹಿತರೆ, ನಿಮ್ಮೆಲ್ಲರ ಹಾರೈಕೆಯಿಂದ ನಾನು ಆರೋಗ್ಯವಾಗಿದ್ದೇನೆ. ವೈದ್ಯರು ಒಂದು ದಿನ ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಅದರಂತೆ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ. ಯಾರು ಗಾಬರಿಯಾಗಬೇಡಿ, ಹಾಗೂ ಆಸ್ಪತ್ರೆ ಕಡೆ ಯಾರು ಬರಬೇಡಿ. ನಾಳೆ ಎಂದಿನಂತೆ ನಿಮ್ಮ ಮುಂದೆ ಬರುತ್ತೇನೆ ಎಂದು ಕೊಳ್ಳೆಗಾಲ ಶಾಸಕ ಎನ್.ಮಹೇಶ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಅಭಿಮಾನಿಗಳಿಗೆ ಈ ಮೂಲಕ ಮನವಿ ಮಾಡಿದ್ದಾರೆ.
ಪ್ರತ್ಯೇಕ ಪ್ರಕರಣ, ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವು: ನೀರಿಗೆ ಬಿದ್ದು ಇಬ್ಬರು ಮೃತಪಟ್ಟಿರುವ ಪ್ರತ್ಯೇಕ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಕಾವೇರಿ ನದಿಗೆ ಇಳಿದಿದ್ದ ಪ್ರವಾಸಿಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಬೆಂಗಳೂರು ಮೂಲದ ರೆಹಾನ್ ಅಹಮ್ಮದ್(18) ಮೃತ ದುರ್ದೈವಿ. ಸದ್ಯ ಯುವಕನ ದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್ನು, ಚಾಮರಾಜನಗರ ತಾಲೂಕಿನ ಉತ್ತುವಳ್ಳಿ ಗ್ರಾಮದ ಚೆಕ್ ಡ್ಯಾಂನ ನೀರಿನಲ್ಲಿ ಮುಳುಗಿ ಯುವಕನೊಬ್ಬ ಸಾವಿಗೀಡಾಗಿರುವ ಘಟನೆ ಭಾನುವಾರ ನಡೆದಿದೆ. ಉತ್ತುವಳ್ಳಿ ಗ್ರಾಮದ ಮಹದೇವ ಪ್ರಸಾದ್(26) ಮೃತ ಯುವಕ. ಸಾವಿಗೆ ಇನ್ನೂ ನಿಖರ ಕಾರಣ ಏನೂ ಅನ್ನುವುದು ತಿಳಿದುಬಂದಿಲ್ಲ. ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂಓದಿ:ನದಿಯಲ್ಲಿ ಮುಳುಗಿ ನಾಲ್ವರು ಯುವಕರ ಸಾವು