ಚಾಮರಾಜನಗರ : ಬಿಎಸ್‌ಪಿಗೆ ನನ್ನದೊಂದು ದೊಡ್ಡ ನಮಸ್ಕಾರ. ಡಿಸೆಂಬರ್ ಬಳಿಕ ಕಾರ್ಯಕರ್ತರು, ಬೆಂಬಲಿಗರನ್ನು ಒಗ್ಗೂಡಿಸಿ ನನ್ನ ಶಕ್ತಿ ತೋರಿಸುತ್ತೇನೆಂದು ಶಾಸಕ ಎನ್.ಮಹೇಶ್ ಹೇಳಿದರು.
ಬಿಎಸ್ಪಿಯನ್ನು ಮತ್ತೆ ಸೇರುವ ಕುರಿತು ಈಟಿವಿ ಭಾರತದೊಂದಿಗೆ ಅವರು ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿನ ನಾಯಕರು ಒಳಗಡೆ ಸೇರಿಸಿಕೊಳ್ಳುವ ಬಗ್ಗೆ ಮಾತಾಡುತ್ತಿಲ್ಲ. ಸೇರಿಸಿಕೊಳ್ಳುವ ಮನಸ್ಥಿತಿಯಲ್ಲೂ ಅವರಿಲ್ಲ ಎಂದರು.
ಶಾಸಕ ಎನ್.ಮಹೇಶ್ ಮತ್ತೆ ಬಿಎಸ್‌ಪಿಗೆ ಬರಬಾರದು ಅಂತಾ ಒಂದಷ್ಟು ಪಟ್ಟಭದ್ರರು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಬಿಎಸ್‌ಪಿಗೆ ವಾಪಸ್ ಹೋಗುವ ಪ್ರಶ್ನೆಯೇ ಉದ್ಭವಿಸಲ್ಲ. ಮನೆಯಿಂದ ಹೊರ ಹಾಕಿದ ಮಗನನ್ನು ಹೇಗೆ ವಾಪಸ್ ಕರೆಯಬೇಕು ಎಂಬುದು ಅವರಿಗೆ ಗೊತ್ತಿಲ್ಲ. ಮಗನ ವಿರುದ್ಧ ಅಪಪ್ರಚಾರ ಮಾಡುವುದು ಮನೆಯೊಳಗೆ ಸೇರಿಸಿಕೊಳ್ಳುವುದಕ್ಕಾ?, ಬಿಎಸ್ಪಿಯ ದೊಡ್ಡ ನಾಯಕರಿಗೆ, ಬುದ್ಧಿ ಜೀವಿಗಳಿಗೆ ದೊಡ್ಡ ನಮಸ್ಕಾರ ಮಾಡಿದ್ದೇನೆ ಎಂದು ಬೇಸರ ಹೊರ ಹಾಕಿದರು.
ಪಕ್ಷದಿಂದ ಉಚ್ಚಾಟನೆ ಮಾಡಿದ ನಂತರ ಸ್ವತಂತ್ರ ಅಭ್ಯರ್ಥಿ ಎಂದು ಘೋಷಿಸಿಕೊಳ್ಳಲು ಅವಕಾಶವಿದ್ದು, ಈಗ ಸ್ವತಂತ್ರ ಶಾಸಕನಾಗಿ ಘೋಷಿಸಿಕೊಂಡು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದ್ದೇನೆ. ಹಾಗಾಗಿ, ಬಿಎಸ್ಪಿ ನಾಯಕರಿಗೆ ನನ್ನ ರಾಜೀನಾಮೆ ಕೇಳುವ ಹಕ್ಕಿಲ್ಲ. ರಾಜೀನಾಮೆ ಹುಡುಗಾಟಿಕೆ ವಿಚಾರವಲ್ಲ. ನನ್ನ ರಾಜೀನಾಮೆ ಕೇಳಲು ಇವರ‍್ಯಾರು?. ರಾಜೀನಾಮೆ ಕೊಟ್ಟು ಕ್ಷೇತ್ರದ 2.5 ಲಕ್ಷ ಜನರಿಗೆ ಏನು ಉತ್ತರ ನೀಡಲಿ ಎಂದು ರಾಜೀನಾಮೆಗೆ ಒತ್ತಾಯಿಸುವ ಬಿಎಸ್ಪಿ ಮುಖಂಡರಿಗೆ ಟಾಂಗ್ ನೀಡಿದರು.
ಬಿಎಸ್ಪಿಯ ಈಗಿನ ನಾಯಕರು ನನ್ನ ಬೈದು ನಾಯಕರಾಗುತ್ತೇವೆ, ಪಕ್ಷ ಕಟ್ಟುತ್ತೇವೆ ಎಂದು ಕೊಂಡಿದ್ದಾರೆ. ಆ ಭ್ರಮೆಯನ್ನು ಮೊದಲು ಬಿಡಬೇಕು. ಬಿಎಸ್ಪಿ ಪಕ್ಷ ಕಟ್ಟಲು ಪ್ರತಿಯೊಬ್ಬ ಕಾರ್ಯಕರ್ತ ಬೀದಿಗಿಳಿದು ಕೆಲಸ ಮಾಡಿದರೆ ಮಾತ್ರ ಸಾಧ್ಯ. ಇವರು ಪಕ್ಷ ಸಂಘಟನೆ ಮಾಡ್ತಿಲ್ಲ. ಹಾದಿ–ಬೀದಿಯಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತ ತಿರುಗುತ್ತಿದ್ದಾರೆ. ಕೊರೊನಾ ಒಂದು ಬರದಿದ್ದರೇ ಮಹೇಶ್ ಶಕ್ತಿ, ಕಾರ್ಯ ಅವರಿಗೆ ಅರ್ಥವಾಗುತ್ತಿತ್ತು ಎಂದು ಕಿಡಿಕಾರಿದರು.
ಇದೇ ವೇಳೆ, ಶಾಲೆಗಳ ಪ್ರಾರಂಭ, ಶುಲ್ಕ ವಸೂಲಾತಿ ಕುರಿತು ಪ್ರತಿಕ್ರಿಯಿಸಿ, ಖಾಸಗಿ ಶಾಲೆಗಳು ಪೋಷಕರು ಹಾಗೂ ಮಕ್ಕಳ ಮೇಲೆ ಒತ್ತಡ ತರುವ ಕೆಲಸ ಮಾಡಬಾರದು. ಅದು ಅಪರಾಧ. ಯಾವುದೇ ವರ್ಗದ ಜನರ ಬದುಕು ಸಹಜ ಸ್ಥಿತಿಗೆ ಬಂದಿಲ್ಲ. ಇಡೀ ಜಗತ್ತು ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿರುವ ಸಂದರ್ಭದಲ್ಲಿ ಖಾಸಗಿ ಶಾಲೆಗಳು ಶುಲ್ಕ ಪಾವತಿಸುವಂತೆ ಒತ್ತಡ ತರಬಾರದು ಎಂದು ಸಲಹೆ ನೀಡಿದರು.