ಚಾಮರಾಜನಗರ : ದಲಿತ ಕೇರಿಗಳಿಗೆ ನೂರಾರು ಮಂದಿ ನುಗ್ಗಿ ಕಲ್ಲು ತೂರಿ ದೌರ್ಜನ್ಯ ಎಸಗಿರುವುದು ಅಕ್ಷಮ್ಯ ಅಪರಾಧ. ಈ ಪ್ರಕರಣದಲ್ಲಿ ನಿಜಕ್ಕೂ ಮಾಜಿ ಸಚಿವ ಸಾ ರಾ ಮಹೇಶ್ ಅವರ ಸಹೋದರ ಭಾಗಿಯಾಗಿದ್ದರೆ, ಖುದ್ದು ಶಾಸಕರೇ ಆತನನ್ನು ಪೊಲೀಸರಿಗೊಪ್ಪಿಸಬೇಕೆಂದು ಶಾಸಕ ಎನ್ ಮಹೇಶ್ ಆಗ್ರಹಿಸಿದರು.
ಕೊಳ್ಳೇಗಾಲದ ತಾಪಂ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಲಿಗ್ರಾಮದಲ್ಲಿ ದಲಿತ ಕೇರಿಗಳಿಗೆ ಗುಂಪು, ಗುಂಪಾಗಿ ನುಗ್ಗಿ ಕಲ್ಲು ತೂರಿ ದೌರ್ಜನ್ಯ ಎಸಗಲಾಗಿದೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಕಲ್ಲು ತೂರಿ ದಲಿತರ ಮೇಲೆ ನಡೆಸಿರುವ ದೌರ್ಜನ್ಯದಲ್ಲಿ ಶಾಸಕ ಸಾ ರಾ ಮಹೇಶ್ ಸಹೋದರರ ಪಾತ್ರವಿದೆ ಎಂದು ಅಲ್ಲಿನ ಯುವಕರು ಹೇಳುತ್ತಿದ್ದಾರೆ. ಒಂದು ವೇಳೆ ಇಂತಹ ಕೖತ್ಯದಲ್ಲಿ ಅವರ ಸಹೋದರ ಭಾಗಿಯಾಗಿದ್ದರೇ ಶಾಸಕರೆ ಪೊಲೀಸರಿಗೊಪ್ಪಿಸಿ ದಲಿತರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಾಮಾಜಿಕ ಜಾಲ ತಾಣಗಳಲ್ಲಿ ದಲಿತ ಕೇರಿಗೆ ಕಲ್ಲು ತೂರುತ್ತಿರುವ ಗುಂಪಿನ ವಿಡಿಯೋಗಳಿವೆ. ನಿಜಕ್ಕೂ ಪೊಲೀಸ್ ಇಲಾಖೆ, ಜಿಲ್ಲಾಡಳಿತ ತಕ್ಷಣ ಅಂತಹ ಕಿಡಿಗೇಡಿಗಳನ್ನ ಪತ್ತೆ ಹಚ್ಚಿ ಬಂಧಿಸಬೇಕು. ಸಕಾ೯ರ ಸಹ ಅಲ್ಲಿನ ದಲಿತರ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಇನ್ನೆರಡು ದಿನದೊಳಗೆ ನಾನೇ ಅಲ್ಲಿಗೆ ತೆರಳುವೆ. ಈಗಾಗಲೇ ಘಟನೆ ಕುರಿತು ದಲಿತ ಸಮುದಾಯ ನನ್ನೊಡನೆ ಮಾತನಾಡಿದ್ದಾರೆ. ಕ್ರಮ ಕೈಗೊಳ್ಳಿ ಎಂದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತಂದಿರುವೆ. ಸ್ವತಃ ಭೇಟಿ ನೀಡಿ ಅಲ್ಲಿನ ದಲಿತರಿಗೆ ಮೂಡಿರುವ ಭಯದ ವಾತಾವರಣ ಹೋಗಲಾಡಿಸುವೆ. ನಿಜಕ್ಕೂ ಪೊಲೀಸ್ ಇಲಾಖೆ ಈ ವಿಚಾರದಲ್ಲಿ ಕಠಿಣ ಕ್ರಮಕೈಗೊಳ್ಳಬೇಕು. ಆ ಮೂಲಕ ನಾವು ದೌರ್ಜನ್ಯ ಎಸಗಿದವರಿಗೆ ನಾವು ಪಾಕಿಸ್ತಾನದಲ್ಲಿಲ್ಲ, ಭಾರತದಲ್ಲೇ ಇರುವುದು ಎಂಬುದನ್ನ ಅರ್ಥ ಮಾಡಿಸಬೇಕಿದೆ ಎಂದರು.