ಗುಂಡ್ಲುಪೇಟೆ (ಚಾಮರಾಜನಗರ): ಕೊರೊನಾ ವಿಚಾರದಲ್ಲಿ ವಿರೋಧ ಪಕ್ಷದ ಶಾಸಕ ನರೇಂದ್ರ ಅವರು ರಾಜಕೀಯ ಮಾಡಬಾರದು ಎಂದು ಗುಂಡ್ಲುಪೇಟೆ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಹೇಳಿದ್ದಾರೆ.
ಪಟ್ಟಣದ ಶಾಸಕರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಜಿಲ್ಲೆಯ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಪಂಚಾಯಿತಿ ಅಧಿಕಾರಿಗಳು ಹಳ್ಳಿಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವ ಜೊತೆಗೆ ಆರೋಗ್ಯದ ಅರಿವನ್ನು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೂ ವಿರೋಧ ಪಕ್ಷದ ಶಾಸಕರು ಟೀಕಿಸುತ್ತಿರುವುದು ಸರಿಯಲ್ಲ ಎಂದರು.
ಗುಂಡ್ಲುಪೇಟೆ ತಾಲ್ಲೂಕಿನ ಮೊದಲ ಪ್ರಕರಣ ತಮಿಳುನಾಡಿಗೆ ಹೋಗಿ ಬಂದ ಲಾರಿ ಡ್ರೈವರ್ನಿಂದ ಕಾಣಿಸಿಕೊಂಡಿತು. ಈಗ ಹಳ್ಳಿಗಳಿಗೆ ಹರಡಿದ್ದು, ಬೆಂಗಳೂರು ಮತ್ತು ಹೊರ ಪ್ರದೇಶದಿಂದ ಬಂದವರಲ್ಲಿ ಹೆಚ್ಚಾಗಿ ಸೋಂಕು ಕಾಣಿಸುತ್ತಿದೆ. ಆದರೂ ಸಹ ತಾಲೂಕಿನ ಜನತೆ ಆತಂಕಪಡುವ ಅಗತ್ಯವಿಲ್ಲ. ಸೂಕ್ತ ಚಿಕಿತ್ಸೆ ಸಿಗುವ ವ್ಯವಸ್ಥೆ ಆರೋಗ್ಯ ಇಲಾಖೆ ಮಾಡುತ್ತಿದೆ ಎಂದರು.
ಇನ್ನು, ಉಸ್ತುವಾರಿ ಸಚಿವರ ಸಭೆಯಲ್ಲಿ ನಮ್ಮ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ವಿಚಾರವಾಗಿ ಚರ್ಚೆ ನಡೆಸಲಾಗಿದೆ. ಅದರಂತೆ ಕಾವೇರಿ ನೀರಾವರಿ ನಿಗಮ ಏತ ನೀರಾವರಿಯಿಂದ ಕೆರೆಗಳಿಗೆ ನೀರು ಹರಿದು ಬರುತ್ತಿದೆ. ಕೆಲವು ದಿನಗಳಿಂದ ವಿದ್ಯುತ್ ಬಿಲ್ ಕಟ್ಟದಿರುವ ಮತ್ತು ಮಳೆಗಾಲದ ಅಡೆತಡೆಗಳಿಂದ ನೀರು ಬಿಡುವುದು ಸ್ಥಗಿತಗೊಂಡಿತ್ತು. ಈಗ ಎಲ್ಲಾ ಸರಿ ಹೋಗಿದ್ದು, ಶೀಘ್ರವೇ ತಾಲ್ಲೂಕು ಮತ್ತು ಜಿಲ್ಲೆಯ ಹಲವು ಕೆರೆಗಳಿಗೆ ನೀರು ಹರಿಸಲಾಗುವುದು ಎಂದರು.