ಗುಂಡ್ಲುಪೇಟೆ(ಚಾಮರಾಜನಗರ): ಅಕ್ಟೋಬರ್ ಅಂತ್ಯದಲ್ಲಿ ನೀರಾವರಿ ಖಾತೆ ಸಚಿವರಾದ ರಮೇಶ್ ಜಾರಕಿಹೊಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರನ್ನು ಕರೆಸಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಸಿ.ಎಸ್.ನಿರಂಜನ ಕುಮಾರ್ ತಿಳಿಸಿದರು.
ತಾಲೂಕಿನ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವ ಗಾಂಧಿ ಗ್ರಾಮ ಏತ ನೀರಾವರಿ ಎರಡನೇ ಹಂತದ ಯೋಜನೆಯ ಕಾಮಗಾರಿಯನ್ನು ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿ ಮಾತನಾಡಿದರು. ತಾಲೂಕಿನ ಬೇಗೂರು ಹೋಬಳಿಯ ಕಮರಹಳ್ಳಿ ಕೆರೆಯಿಂದ ಇನ್ನುಳಿದ ಐದು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಂಬಂಧಪಟ್ಟಂತೆ ರಾಘವಾಪುರ, ಹಳ್ಳದಮಾದಹಳ್ಳಿ, ಅಗತಗೌಡನಹಳ್ಳಿ, ಮಳವಳ್ಳಿ, ಗರಗನಹಳ್ಳಿ ಕೆರೆಗಳಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಶಾಸಕರು, ಕಾಮಗಾರಿಯು ಶೇ.99 ರಷ್ಟು ಮುಗಿದಿದ್ದು, ಇನ್ನುಳಿದ ಕೆಲಸವನ್ನು ಆದಷ್ಟು ಬೇಗ ಪೂರ್ತಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಏತ ನೀರಾವರಿ ಯೋಜನೆಯಿಂದ ತಾಲೂಕಿನ ಹೊರೆಯಾಲ, ಶ್ರೀಕಂಠಪುರ ಹಾಗೂ ಇನ್ನುಳಿದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುಮೋದನೆ ನೀಡಿದ್ದು, ಅದು ಕೂಡ ಶೀಘ್ರವೇ ಕೆಲಸ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಡಿ.ಪಿ.ಜಗದೀಶ್, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಎಂ.ಪ್ರಣಾಯ್ ಸೇರಿದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ರೈತರು ಇದ್ದರು.