ಚಾಮರಾಜನಗರ: ಡ್ರಗ್ಸ್ ದಂಧೆ ವಿಚಾರದಲ್ಲಿ ಯಾರೂ ಕೂಡ ರಾಜಕೀಯ ಮಾಡಬಾರದು. ಡ್ರಗ್ಸ್ ಪಿಡುಗಿನ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು, ಇಡೀ ಯುವ ಜನಾಂಗವನ್ನೇ ನಾಶ ಮಾಡುವ ದರಿದ್ರ ದಂಧೆ ಇದು. ಪಕ್ಷಗಳು, ರಾಜಕೀಯ ಮೀರಿ ನಾವೆಲ್ಲರೂ ಕೈ ಜೋಡಿಸಬೇಕಿದೆ. ಒಂದು ಮನಸ್ಸಿನಿಂದ ಎದುರಿಸದಿದ್ದರೆ ಭಸ್ಮಾಸುರನಾಗಿ ಎಲ್ಲರನ್ನೂ ಸುಡಲಿದೆ. ನಾವು ಶಿಕ್ಷಣ ಇಲಾಖೆ ಮತ್ತು ಗೃಹ ಇಲಾಖೆಗಳ ಸಮನ್ವಯತೆ ಸಾಧಿಸಿದ್ದು, ಪ್ರತೀ ಬಿಇಒ ಸಂಬಂಧಪಟ್ಟ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಜಾಗೃತಿ ಮೂಡಿಸಲು ಮುಂದಾಗಿದ್ದೇವೆ. ಶಾಲಾ ಮಕ್ಕಳು ಡ್ರಗ್ಸ್ಗೆ ಬಲಿಯಾಗಬಾರದೆಂದು ಅರಿವು ಮೂಡಿಸುವ ಸಲುವಾಗಿ ಪ್ರತೀ ಜಿಲ್ಲೆಯಲ್ಲಿ ಸಮಿತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಡ್ರಗ್ಸ್ ಕೇಸ್ ಸಂಬಂಧ ತನಿಖೆ ಹಾದಿ ತಪ್ಪುತ್ತಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿರುವ ಕುರಿತು ಮಾತನಾಡಿ, ಸಿದ್ದರಾಮಯ್ಯಗೆ ನಾನು ಸಂಪೂರ್ಣ ಭರವಸೆ ಕೊಡುತ್ತೇನೆ. ಸರ್ಕಾರ ಬಹಳ ಗಟ್ಟಿಯಾಗಿ ನಿರ್ಧರಿಸಿ ದಂಧೆಯ ಆಳಕ್ಕೆ ಹೋಗಲು ಸೂಚಿಸಲಾಗಿದೆ. ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದರು.
ದಾಸರಹಳ್ಳಿ ಕ್ಷೇತ್ರದಲ್ಲಿ ಮಳೆಯಿಂದ ಬಹಳಷ್ಟು ಹಾನಿಯಾಗಿದ್ದು, ತುರ್ತಾಗಿ ಹಣ ಬಿಡುಗಡೆ ಮಾಡಬೇಕೆಂದು ಸಿಎಂ ಯಡಿಯೂರಪ್ಪ ಅವರನ್ನು ಹೆಚ್ಡಿಕೆ ಭೇಟಿ ಮಾಡಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದರು.