ಬೆಂಗಳೂರು: ಚಾಮರಾಜನಗರ ದುರಂತ ಕುರಿತು ನ್ಯಾಯಮೂರ್ತಿಗಳು ಸಲ್ಲಿಸುವ ವರದಿ ಇಂದು ಬಹಿರಂಗಗೊಳ್ಳುವ ಸಾಧ್ಯತೆ ಇದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಮೂರ್ತಿ ವೇಣುಗೋಪಾಲಗೌಡ ಅವರು ನಿನ್ನೆ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸಿದ್ದಾರೆ. ಇಂದು ಹೈಕೋರ್ಟ್ ವರದಿ ಬಹಿರಂಗಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ತನಿಖೆ ನಡೆಯುವ ಹಂತದಲ್ಲಿ ನಾವು ಮಧ್ಯ ಪ್ರವೇಶಿಸುವ ಹಾಗಿಲ್ಲ. ಹೈಕೋರ್ಟ್ನ ಪ್ರತಿಕ್ರಿಯೆ ಬರಬೇಕಿದೆ ಎಂದು ಅವರು ತಿಳಿಸಿದರು.
ಮಾಧ್ಯಮದ ಕರ್ತವ್ಯಪ್ರಜ್ಞೆ ದೊಡ್ಡದು...
ಮಾಧ್ಯಮಗಳನ್ನು ಬರಬೇಡಿ ಎಂಬ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳು ಇಂದಿನ ಸಂಕಷ್ಟದ ಸಂದರ್ಭದಲ್ಲಿ ನಿರ್ವಹಿಸುತ್ತಿರುವ ಜವಾಬ್ದಾರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಕಳೆದ ನಲವತ್ತು ವರ್ಷಗಳಿಂದಲೂ ನಿರಂತರವಾಗಿ ತಾವು ಸಾರ್ವಜನಿಕ ಸೇವೆಯಲ್ಲಿದ್ದು, ಮಾಧ್ಯಮಗಳ ಕರ್ತವ್ಯಪ್ರಜ್ಞೆಯನ್ನು ಗಮನಿಸುತ್ತಲೇ ಬಂದಿದ್ದೇನೆ. ರೂಪಾಂತರಗೊಳ್ಳುತ್ತಿರುವ ಸವಾಲುಗಳ ನಡುವೆ ಈ ಕ್ಷೇತ್ರದ ಹೊಣೆಗಾರಿಕೆ ಹಿರಿದಾಗುತ್ತಲೇ ಇದೆ. ಅಂತೆಯೇ ಮಾಧ್ಯಮ ಕ್ಷೇತ್ರವೂ ಈ ಸವಾಲುಗಳನ್ನು ದಿಟ್ಟವಾಗಿ ಸ್ವೀಕರಿಸಿ ಜನಸಾಮಾನ್ಯರಿಗೆ ನೈಜ ಸುದ್ದಿಯನ್ನು ತಲುಪಿಸುವಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ ಎಂದರು.
ಜನಸಾಮಾನ್ಯರು, ಸರ್ಕಾರದ ನಡುವೆ ಕೊಂಡಿಯಂತೆ ತನ್ನ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿದೆ. ಮಾಧ್ಯಮ ಕ್ಷೇತ್ರ ಸಕ್ರಿಯವಾಗಿ ಕಾರ್ಯ ನಿರ್ವಹಿಸದೇ ಇದ್ದಲ್ಲಿ ನಮ್ಮ ನಾಗರಿಕರು ಇಷ್ಟು ಸಬಲರಾಗಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಗಮನಿಸಿಯೇ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತ ಮಿತ್ರರನ್ನು ಕೋವಿಡ್ ಫ್ರಂಟ್ ಲೈನ್ ವಾರಿಯರ್ಗಳಾಗಿ ಸರ್ಕಾರ ಗುರುತಿಸಿದೆ ಎಂದರು.
ತಾವೂ ಸಹ ಎಂದಿಗೂ ಮಾಧ್ಯಮಗಳ ಸೇವೆಗೆ ಋಣಿಯಾಗಿದ್ದೇನೆ. ತಾವು ಎಂದಿಗೂ ಮಾಧ್ಯಮದವರನ್ನು ಬರಬೇಡಿ ಎಂದು ಹೇಳಿಲ್ಲ. ಇದು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದರು.
ಓದಿ: ಕೊರೊನಾ ಹಿಮ್ಮೆಟ್ಟಿಸಿ, 3ನೇ ಅಲೆ ವಿರುದ್ಧದ ಸಮರಕ್ಕೆ ಮುಂಬೈ ಸಜ್ಜು.. ಬಿಎಂಸಿ ಹೆಚ್ಚುವರಿ ಆಯುಕ್ತರು ಹೀಗಂತಾರೆ..