ಗುಂಡ್ಲುಪೇಟೆ: ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಇಂದು ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ರೈತರು ಹಾಗೂ ವರ್ತಕರ ಬಳಿ ತೆರಳಿದ ಸಚಿವರು, ವ್ಯಾಪಾರ-ವಹಿವಾಟು ಬಗ್ಗೆ ವಿಚಾರಿಸಿದರು. ಅಲ್ಲದೆ, ಮಾರುಕಟ್ಟೆಗೆ ಬೆಳೆಗಳನ್ನು ಸಾಗಿಸುವಾಗ ಚೆಕ್ ಪೋಸ್ಟ್ ಬಳಿ, ಇಲ್ಲವೇ ದಾರಿ ಮಧ್ಯೆ ಪೊಲೀಸರಿಂದ ಸಮಸ್ಯೆಯಾಗುತ್ತಿದೆಯೇ ಎಂದು ಮಾರುಕಟ್ಟೆಯಲ್ಲಿ ಇದ್ದ ರೈತರ ಬಳಿ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಅನೇಕ ರೈತರು ಬೆಳೆಗಳನ್ನು ಕಟಾವು ಮಾಡಲು ಹೆದರುತ್ತಿದ್ದಾರೆ. ಕಲ್ಲಂಗಡಿ, ಬಾಳೆ, ತರಕಾರಿಗಳಿಗೆ ಬೆಲೆ ಇಲ್ಲದೆ ಕಂಗಲಾಗಿದ್ದಾರೆ. ಬೆಳೆಗಳನ್ನು ಮಾರಾಟ ಮಾಡಿದರೆ ಕೂಲಿ ನೀಡಲು ಆಗುತ್ತಿಲ್ಲ. ಈ ಬಗ್ಗೆ ಗಮನ ಹರಿಸಿ ರೈತರಿಗೆ ಸಹಾಯವಾಗುವಂತೆ ಬೆಲೆ ನಿಗದಿ ಮಾಡಿ ಎಂದು ರೈತರು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅವರು, ರೈತರ ಬೆಳೆಗೆ ಉತ್ತಮ ದರ ಸಿಗುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಬೇಕಾಬಿಟ್ಟಿ ದರಗಳ ಮಾರಾಟಕ್ಕೆ ಕಡಿವಾಣ ಬೀಳಬೇಕು. ರೈತರಿಗೆ ಒಳ್ಳೇ ದರ ಸಿಗಬೇಕು. ಆ ದರದ ಮೇಲೆ ಮಾರಾಟ ದರದ ಮೇಲೂ ನಿಗಾ ವಹಿಸಬೇಕು. ರೈತರಿಗೆ ನಷ್ಟವಾಗಿ ದಲ್ಲಾಳಿಗಳಿಗೆ ಮಾತ್ರ ಲಾಭವಾಗುವಂತೆ ಮಾಡುವುದು ಸರಿಯಲ್ಲ. ಇದಕ್ಕೆ ಎಪಿಎಂಸಿಯಿಂದ ಕಡಿವಾಣ ಬೀಳಬೇಕು. ಈ ಬಗ್ಗೆ ಕೂಡಲೇ ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರ ಮೂಲಕ ಆದೇಶ ಹೊರಡಿಸಲಾಗುವುದು. ಹಾಗಯೇ ಎಪಿಎಂಸಿಗೆ ಕೋಲ್ಡ್ ಸ್ಟೋರೇಜ್ ಮಂಜೂರು ಮಾಡಲಾಗುವುದು ಎಂದು ಅವರು ತಿಳಿಸಿದರು.