ಚಾಮರಾಜನಗರ : ವಸತಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಜಿಲ್ಲೆಯ ವಿವಿಧೆಡೆ ಮಳೆಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ ಪಿ ಶಿವಕುಮಾರ್ ಅವರನ್ನು ಸಚಿವ ವಿ.ಸೋಮಣ್ಣ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಮೊದಲು ಕೊಳ್ಳೇಗಾಲಕ್ಕೆ ಆಗಮಿಸಿದ ಸಚಿವ ಸೋಮಣ್ಣ, ಎಸ್ಪಿ ಶಿವಕುಮಾರ್ ಸ್ಥಳಕ್ಕೆ ಬಾರದಿರುವ ಬಗ್ಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಬೆಂಗಳೂರಿನಿಂದ ನಾನೇ ಬಂದಿದ್ದೀನಿ. ನೀವ್ಯಾಕೆ ಇನ್ನೂ ಬಂದಿಲ್ಲ. ಚಾಮರಾಜನಗರದಿಂದ ಕೊಳ್ಳೇಗಾಲ ಬರೋದಕ್ಕೆ ಎಷ್ಟು ಸಮಯ ಬೇಕು ನಿಮಗೆ ಎಂದು ಗರಂ ಆದರು.
ನಂತರ ಚಾಮರಾಜನಗರಕ್ಕೆ ಬರುವಷ್ಟರಲ್ಲಿ ಮಾಂಬಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲೇ ಶವಸಂಸ್ಕಾರ ಮಾಡಿರುವ ಬಗ್ಗೆ ತಿಳಿಯುತ್ತಿದ್ದಂತೆ ಎಸ್ಪಿಯ ಮೇಲೆ ಮತ್ತೆ ಸಚಿವರು ಕೆಂಡಾಮಂಡಲವಾದರು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಳಿ ತಪ್ಪುತ್ತಿದೆ. ಏನ್ ಮಾಡ್ತಿದೀರಿ? ನೀವು ಸ್ಥಳದಲ್ಲಿದ್ದು ಯಾಕೆ ಪರಿಸ್ಥಿತಿಯನ್ನು ನಿಯಂತ್ರಿಸಲಿಲ್ಲ? ಗ್ರಾಮಸ್ಥರನ್ನು ಯಾಕೆ ಮನವೊಲಿಸಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ನಗರದಲ್ಲಿ ಹೆಚ್ಚಿನ ಮಳೆ: ಪ್ರವಾಸದ ನಡುವೆ ಬೆಂಗಳೂರಿನಲ್ಲಿ ರಸ್ತೆಗಳು ಗುಂಡಿಬಿದ್ದ ವಿಚಾರದ ಕುರಿತು ಪ್ರತಿತಿಕ್ರಿಯಿಸಿದ ಸಚಿವರು, ಬೆಂಗಳೂರಿನಲ್ಲಿ 486 ಮಿಲಿಮೀಟರ್ ಮಳೆಯಾಗಿದೆ. ಹಿಂದೆಂದೂ ಕಾಣದ ಮಳೆಯಾಗಿದೆ. ನನ್ನ ಕ್ಷೇತ್ರದಲ್ಲಿ ಒಂದೇ ಒಂದು ಅಡಚಣೆಯಾಗಿಲ್ಲ. ಮಹದೇವಪುರ ಸೇರಿದಂತೆ ಎರಡು ಮೂರು ಕ್ಷೇತ್ರಗಳಲ್ಲಿ ರಸ್ತೆಗಳು ಗುಂಡಿಬಿದ್ದಿವೆ. ಹಳೇ ಬೆಂಗಳೂರು ಪ್ರದೇಶದಲ್ಲಿ ಹೆಚ್ಚು ಹಾನಿಯಾಗಿಲ್ಲ ಎಂದು ಹೇಳಿದರು. ಸರ್ಕಾರವು ರಸ್ತೆ ಅಭಿವೃದ್ಧಿಗೆ 1500 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಹೇಳಿದರು.
ಬಿಸಿ ಬಿಸಿ ಚಹಾ ಜೊತೆ ನೆನಪುಗಳ ಸರಮಾಲೆ : ಕೊಳ್ಳೇಗಾಲ, ಯಳಂದೂರು ಭಾಗಗಳ ಮಳೆಹಾನಿ ವೀಕ್ಷಣೆ ಮಾಡಿ ಚಾಮರಾಜನಗರದತ್ತ ಬರುವಾಗ ಮಾರ್ಗ ಮಧ್ಯೆ ಸಂತೆಮರಳ್ಳಿಯ ಶಿವನಂದಿ ಬೇಕರಿಯಲ್ಲಿ ಟೀ ಕುಡಿದು ಅಧಿಕಾರಿಗಳಿಗೂ ಚಹಾ ಕುಡಿಸಿದರು.
ಈ ಹಿಂದೆ ಇದೇ ರೀತಿ ಮಾಜಿ ಪ್ರಧಾನಿ ದೇವೆಗೌಡರ ಜೊತೆ ರಸ್ತೆ ಬದಿಯಲ್ಲಿ ಟೀ ಕುಡಿದಿದ್ದೆ. ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಚುನಾವಣಾ ಪ್ರಚಾರದ ವೇಳೆ ಟೀ ಕುಡಿದಿದ್ದೆ. ಈ ರೀತಿ ಬೀದಿ ಬದಿ ಟೀ ಕುಡಿದು ಶೇಂಗಾ ತಿಂದು ಕೋಡಿ ಪಾಪಣ್ಣ ಅವರನ್ನು ಗೆಲ್ಲಿಸಿಕೊಂಡಿದ್ದೆವು ಎಂದು ಬಿಸಿಬಿಸಿ ಟೀ ಜೊತೆಗೆ ರಾಜಕೀಯ ನೆನಪನ್ನು ಮೆಲುಕು ಹಾಕಿದರು.
ಇದನ್ನೂ ಓದಿ :ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಸಂಸದ ಮುದ್ದಹನುಮೇಗೌಡ ಗುಡ್ ಬೈ.. ಡಿಕೆಶಿಗೆ ರಾಜೀನಾಮೆ ಪತ್ರ ಸಲ್ಲಿಕೆ