ಚಾಮರಾಜನಗರ : 6 ವಿದ್ಯಾರ್ಥಿಗಳಿಂದ ಆರಂಭವಾದ ವಿವಾದ ಈಗ ಇಡೀ ರಾಜ್ಯ, ದೇಶಕ್ಕೆ ಹಬ್ಬುತ್ತಿದೆ. ಕೋಮು ಗಲಭೆಯತ್ತ ತಿರುಗುತ್ತಿದೆ. ಇದಕ್ಕೆಲ್ಲಾ ಕಾರಣ ಕಾಂಗ್ರೆಸ್ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.
ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹಿಜಾಬ್ ವಿವಾದವನ್ನು ಗೊಂದಲವೆಬ್ಬೆಸಿ ಮುಸ್ಲಿಮರ ವೋಟು ಪಡೆಯಲು ಕಾಂಗ್ರೆಸ್ ಯತ್ನಿಸುತ್ತಿದೆ, ವಿದ್ಯಾರ್ಥಿಗಳನ್ನು ರಾಜಕೀಯ ದಾಳ ಮಾಡಲು ಹೊರಟಿರುವುದು ಮಕ್ಕಳ ಶಿಕ್ಷಣಕ್ಕೆ ಮಾಡಿದ ಅನ್ಯಾಯ. ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಶಾಲೆಗೆ ಹೋಗಲು ಕಾಂಗ್ರೆಸ್ ಅವಕಾಶ ಮಾಡಿಕೊಡಬೇಕೆಂದು ಹೇಳಿದರು.
ಈ ಹಿಂದೆ ಗೋಹತ್ಯೆ ಮಾಡುವವರಿಗೆ ಕುಮ್ಮಕ್ಕು ಕೊಟ್ಟು ಗೋರಕ್ಷಕರನ್ನು ಜೈಲಿಗೆ ಕಳುಹಿಸಿದ್ದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಸಿದ್ದರಾಮಯ್ಯ ಸೋತರು. ಈಗ ಅದೇ ಉಡುಪಿಯಿಂದಲೇ ಕಾಂಗ್ರೆಸ್ ಹಿಜಾಬ್ ವಿವಾದ ಎಬ್ಬಿಸಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನವನ್ನು ಕಳೆದುಕೊಳ್ಳಲಿದೆ ಎಂದು ವಾಗ್ದಾಳಿ ನಡೆಸಿದರು.
ಲಿಂಗಾಯತರನ್ನು ಒಡೆದು ಛಿದ್ರಛಿದ್ರ ಮಾಡಿದರು ಈಗ ಸಮಾಜದಲ್ಲಿ ಮೂರು ಗುಂಪು ಮಾಡಲು ಹೊರಟಿರುವ ಕಾಂಗ್ರೆಸ್ ರಾಜ್ಯದಲ್ಲಿ ನಿರ್ನಾಮ ಆಗಲಿದೆ. ಹಿಜಾಬ್ ವಿವಾದ ಕೋಮು ಗಲಭೆಗೆ ತಿರುಗುತ್ತಿದ್ದು ದೇಶಕ್ಕೆ ವ್ಯಾಪಿಸುತ್ತಿದೆ. ಪಕ್ಕದ ಕೇರಳ ರಾಜ್ಯದ ಉಚ್ಛ ನ್ಯಾಯಾಲಯ ಸಮವಸ್ತ್ರದ ಬಗ್ಗೆ ಕೊಟ್ಟಿರುವ ತೀರ್ಪು ಗಲಭೆ ಉಂಟು ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ತಿಳಿದಿಲ್ಲವೇ ಎಂದು ಕಿಡಿಕಾರಿದರು.
ಶಿಸ್ತು ಕಾಪಾಡಲು ರಜೆ ಘೋಷಣೆ : ವಸ್ತ್ರಸಂಹಿತೆ ಜಾರಿ ಮಾಡಿ ಅನುಷ್ಟಾನ ಮಾಡದಿದದ್ದು ವೈಫಲ್ಯವಲ್ಲ. ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಶಾಲೆಗೆ ಬರಲು ಕಾಂಗ್ರೆಸ್ ನವರು ಬಿಡದಿರುವುದರಿಂದ ಶಿಸ್ತು ಕಾಪಾಡಲು ರಜೆ ಘೋಷಣೆ ಮಾಡಲಾಗಿದೆ, ನಾಳೆ ಮಧ್ಯಾಹ್ನ ನ್ಯಾಯಾಲಯದಲ್ಲಿ ಏನೇ ಆದೇಶ ಬಂದರು ನಾವು ಬದ್ಧರಾಗಿರುತ್ತೇವೆ ಎಂದರು.
ಧಂ ಇದ್ದರೆ ಮಸೀದಿಗೆ ಕರೆದೊಯ್ಯಿರಿ : ಕಲುಬರಗಿ ಶಾಸಕಿ ಫಾತೀಮಾ ಧಂ ಇದ್ದರೇ ವಿಧಾನಸೌಧದಲ್ಲಿ ತಡೆಯಿರಿ ತಾನು ಹಿಜಾಬ್ ಹಾಕೇ ಬರುತ್ತೇನೆಂದು ಹೇಳಿದ್ದಾರೆ. ವಿಧಾನಸೌಧಕ್ಕೆ ಹಾಕಿಕೊಂಡು ಬರಬೇಡಿ ಎಂದು ನಾವು ಹೇಳಿಲ್ಲ, ಶಿಕ್ಷಣ ಕ್ಷೇತ್ರದಲ್ಲಿ ಸಮವಸ್ತ್ರ ಅಷ್ಟೇ ಸಾಕು ಎಂಬುದು ನಮ್ಮ ವಾದ. ಧಂ ಪ್ರಶ್ನೆ ಹಿಜಾಬ್ ವಿಧಾನಸೌಧದಲ್ಲಿ ಬರಲ್ಲ, ಕಾಂಗ್ರೆಸ್ ನಾಯಕರಿಗೆ ಕೇಳುತ್ತೇನೆ ಧಂ ಇದ್ದರೇ ಆ ಶಾಸಕಿಯನ್ನು ಮಸೀದಿಗೆ ಕರೆದುಕೊಂಡು ಹೋಗಿ ಎಂದು ಸವಾಲು ಹಾಕಿದರು.